ಮೊದಲ ಆ್ಯಶಸ್ ಟೆಸ್ಟ್ | ಆಸ್ಟ್ರೇಲಿಯ ಕ್ರಿಕೆಟ್ ತಂಡ ಪ್ರಕಟ

PC: X
ಮೆಲ್ಬರ್ನ್, ನ.5: ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಆಸ್ಟ್ರೇಲಿಯದ 15 ಸದಸ್ಯರನ್ನು ಒಳಗೊಂಡ ಕ್ರಿಕೆಟ್ ತಂಡವನ್ನು ಬುಧವಾರ ಪ್ರಕಟಿಸಲಾಗಿದ್ದು, ಆರಂಭಿಕ ಆಟಗಾರ ಸ್ಯಾಮ್ ಕಾನ್ಸ್ಟಾಸ್ರನ್ನು ತಂಡದಿಂದ ಕೈಬಿಡಲಾಗಿದ್ದು, ಹೊಸ ಮುಖ ಜೇಕ್ ವೆದರಾಲ್ಡ್ಗೆ ಮೊದಲ ಬಾರಿ ಅವಕಾಶ ನೀಡಲಾಗಿದೆ.
ವೆಸ್ಟ್ಇಂಡೀಸ್ ಕ್ರಿಕೆಟ್ ಪ್ರವಾಸದ ವೇಳೆ ಬ್ಯಾಟಿಂಗ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾನ್ಸ್ಟಾಸ್ ಅವರು ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದು, ಅವರ ಬದಲಿಗೆ ಶೀಫೀಲ್ಡ್ ಶೀಲ್ಡ್ ಟೂರ್ನಿಯ ಆರಂಭದಲ್ಲಿ 3 ಅರ್ಧಶತಕಗಳ ಸಹಿತ 906 ರನ್ ಗಳಿಸಿರುವ ವೆದರಾಲ್ಡ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ದೇಶೀಯ ಋತುವಿನಲ್ಲಿ ಐದು ಶತಕಗಳನ್ನು ಗಳಿಸಿ ಫಾರ್ಮ್ಗೆ ಮರಳಿರುವ ಅಗ್ರ ಸರದಿಯ ಬ್ಯಾಟರ್ ಮಾರ್ನಸ್ ಲ್ಯಾಬುಶೇನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಕ್ಯಾಮರೂನ್ ಗ್ರೀನ್ ಬೌಲಿಂಗ್ ಸಾಮರ್ಥ್ಯವು ಅಂತಿಮ ಟೀಮ್ ಆಯ್ಕೆ ಹಾಗೂ ವೆದರಾಲ್ಡ್ ಒಳಗೊಳ್ಳುವಿಕೆಯನ್ನು ನಿರ್ಧರಿಸಲಿದೆ. ಬೆನ್ನಿನ ಶಸ್ತ್ರಚಿಕಿತ್ಸೆಯ ನಂತರ ಗ್ರೀನ್ ಅವರು ಈ ಋತುವಿನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ನಲ್ಲಿ ಕೇವಲ 4 ಓವರ್ ಬೌಲಿಂಗ್ ಮಾಡಿದ್ದಾರೆ.
ಬಿಳಿ ಚೆಂಡಿನ ಕ್ರಿಕೆಟ್ನಲ್ಲಿ ಬ್ಯಾಟ್ ಹಾಗೂ ಬೌಲ್ ನಲ್ಲಿ ಉತ್ತಮ ಫಾರ್ಮ್ನಲ್ಲಿರುವ ಹೊರತಾಗಿಯೂ ಮಿಚೆಲ್ ಮಾರ್ಷ್ಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.
ಪ್ಯಾಟ್ ಕಮಿನ್ಸ್ ಬೆನ್ನುನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 21ರಂದು ಪರ್ತ್ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
‘‘ಮೊದಲ ಟೆಸ್ಟ್ ಪಂದ್ಯಕ್ಕಾಗಿ ಮಾತ್ರ ತಂಡವನ್ನು ಪ್ರಕಟಿಸಲಾಗಿದ್ದು, ಅಂತಿಮ 11ರ ಬಳಗವನ್ನು ಇನ್ನಷ್ಟೇ ಖಚಿತಪಡಿಸಬೇಕಾಗಿದೆ’’ ಎಂದು ಅಯ್ಕೆ ಸಮಿತಿಯ ಅಧ್ಯಕ್ಷ ಜಾರ್ಜ್ ಬೈಲಿ ಹೇಳಿದ್ದಾರೆ.
*ಆಸ್ಟ್ರೇಲಿಯ ಕ್ರಿಕೆಟ್ ತಂಡ(ಮೊದಲ ಟೆಸ್ಟ್ಗೆ ಮಾತ್ರ): ಸ್ಟೀವ್ ಸ್ಮಿತ್(ನಾಯಕ), ಶಾನ್ ಅಬೊಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಬ್ರೆಂಡನ್ ಡಾಗೆಟ್, ಕ್ಯಾಮರೂನ್ ಗ್ರೀನ್, ಜೋಶ್ ಹೇಝಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ನಾಥನ್ ಲಿಯೊನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್ಸ್ಟರ್.







