ಆಸ್ಟ್ರೇಲಿಯಾಕ್ಕೆ ಶ್ರೀಲಂಕಾ ವಿರುದ್ಧ 5 ವಿಕೆಟ್ ಜಯ
ವಿಶ್ವಕಪ್ ನಲ್ಲಿ ಖಾತೆ ತೆರೆದ ಆಸೀಸ್, ಲಂಕಾಗೆ ಹ್ಯಾಟ್ರಿಕ್ ಸೋಲು

Photo: Twitter
ಲಕ್ನೋ: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಎಕಾನ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯ 5 ವಿಕೆಟ್ ಗಳ ಜಯ ಸಾಧಿಸಿದೆ. ಏಕದಿನ ವಿಶ್ವಕಪ್ ನ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ತಂಡ ಶ್ರೀಲಂಕಾ ಸೋಲಿಸುವುದರೊಂದಿಗೆ ಟೂರ್ನಿ ಮೊದಲ ಜಯ ತನ್ನದಾಗಿಸಿಕೊಂಡಿದೆ.
ಉತ್ತಮ ಆರಂಭದ ಹೊರತಾಗಿಯೂ ಶ್ರೀಲಂಕಾ ವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ್ದ ಆಸೀಸ್ ಪಡೆ ಗೆಲುವಿಗೆ 210ರನ್ ಗುರಿ ಪಡೆಯಿತು. ಅಲ್ಪ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಗೆ ಆಘಾತ ನೀಡಿದ ದಿಲ್ಶಾನ್ ಮದುಶಂಕ ಮೇಡನ್ 2 ಓವರ್ ಎಸೆದು ಒಂದೇ ಒವರ್ ನಲ್ಲಿ ಡೇವಿಡ್ ವಾರ್ನರ್ (11) ಹಾಗೂ ಸ್ಟೀವನ್ ಸ್ಮಿತ್ ಶೂನ್ಯಕ್ಕೆ ಎಲ್ ಬಿಡಬ್ಲ್ಯೂ ಮಾಡಿ ಗಮನ ಸೆಳೆದರು. 28 ರನ್ ಗೆ 2 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ಆಸ್ಟ್ರೇಲಿಯ ಗೆ ಆರಂಭಿಕ ಮಿಷೆಲ್ ಮಾರ್ಷ್ 9 ಬೌಂಡರಿ ಸಹಿತ 52 ರನ್ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸುವ ಹಾದಿಯಲ್ಲಿದ್ದರು. ಆದರೆ ಚಮಿಕಾ ಕರುನರತ್ನೆ ಅವರನ್ನು ರನೌಟ್ ಮಾಡುವಲ್ಲಿ ಯಶಸ್ವಿ ಯಾದರು.
ಬಳಿಕ ಜೊತೆಯಾದ ಮಾರ್ನಸ್ ಲಬುಶೇನ್ ಹಾಗೂ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ 77 ರನ್ ಗಳ ಜೊತೆಯಾಟ ನೀಡಿದರು. ಮಾರ್ನಸ್ ಲಬುಶೇನ್ 40 ಬಾರಿಸಿ ದಿಲ್ಶಾನ್ ಮದುಶಂಕ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡರು. ಜೋಸ್ ಇಂಗ್ಲಿಸ್ 5 ಬೌಂಡರಿ 1 ಸಿಕ್ಸರ್ ಸಹಿತ 58 ರನ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಗ್ಲೇನ್ ಮಾಕ್ಸ್ ವೆಲ್ 4 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 31 ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರಿಗೆ ಸಾಥ್ ನೀಡಿದ್ದ ಮಾರ್ಕಸ್ ಸ್ಟೋನಿಶ್ 20 ಗಳಿಸಿದರು.
ಶ್ರೀಲಂಕಾ ಪರ ದಿಲ್ಶಾನ್ ಮದುಶಂಕ 3 ವಿಕೆಟ್ ಪಡೆದರೆ ದುನಿತ್ ವೆಲ್ಲಾಲಗೆ 1 ವಿಕೆಟ್ ಕಬಳಿಸಿದರು.
ನಾಯಕ ದಾಸನ್ ಶನಕಾ ಅನುಪಸ್ಥಿತಿ ಯಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಆಸ್ಟ್ರೇಲಿಯ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಬಂದ ಲಂಕಾ ಆರಂಭಿಕ ಬ್ಯಾಟರ್ಸ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದ್ದರು. ಮೊದಲ ವಿಕೆಟ್ ಪತನಕ್ಕೆ 125 ರನ್ ಜೊತೆಯಾಟ ಆಡಿದ ಪತುಮ್ ನಿಸಂಕಾ ಹಾಗೂ ಕುಶಾಲ್ ಪರೇರಾ ಆಸೀಸ್ ಬೌಲರ್ಸ್ ಗಳನ್ನು ಕಾಡಿದರು.ಪತುಮ್ ನಿಸಂಕಾ 8 ಬೌಂಡರಿ ಸಹಿತ 61 ರನ್ ಗಳಿಸಿದರೆ ಕುಶಾಲ್ ಪರೇರಾ 12 ಬೌಂಡರಿ ಸಹಿತ 78 ರನ್ ಅರ್ಧಶತಕ ಬಾರಿಸಿ ಪ್ಯಾಟ್ ಕಮ್ಮಿನ್ಸ್ ಗೆ ವಿಕೆಟ್ ಒಪ್ಪಿಸಿದರು.
ಉತ್ತಮ ಆರಂಭದ ಹೊರತಾಗಿಯೂ ಮಾದ್ಯಮ ಕ್ರಮಾಂಕದ ವೈಫಲ್ಯ ತಂಡ ವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿತು. ಲಂಕಾ ಬ್ಯಾಟರ್ಸ್ ಆಸ್ಟ್ರೇಲಿಯ ಬೌಲಿಂಗ್ ಎದುರು ನಿಲ್ಲಲಾಗದೆ, ವಿಕೆಟ್ ಗಳು ಒಂದಾದ ಮೇಲೆ ಒಂದರಂತೆ ಬೀಳತೊಡಗಿತು. ಕುಶಾಲ್ ಮೆಂಡಿಸ್ 9 ರನ್ ಗೆ ಆಡಂ ಝಾಂಪ ಬೌಲಿಂಗ್ ನಲ್ಲಿ ಡೇವಿಡ್ ವಾರ್ನರ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ನಾಲ್ಕನೇ ಕ್ರಮಾಂಕದ ಸದೀರ ವಿಕ್ರಮ 8 ರನ್ ಗಳಿಸಿ ಆಡಂ ಝಾಂಪ ಗೆ ಎಲ್ ಬಿಡಬ್ಲ್ಯೂ ಆಗಿ ನಿರಾಸೆ ಮೂಡಿಸಿದರು. 32.1 ಮಿಷೆಲ್ ಸ್ಟಾರ್ಕ್ ಬೌಲಿಂಗ್ ಮಾಡುತ್ತಿದ್ದ ಸಂದರ್ಭ ಮಳೆ ಕಾಣಿಸಿಕೊಂಡ ಪರಿಣಾಮ ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು.ಮಳೆ ನಿಂತ ಮೇಲೆ ಬ್ಯಾಟಿಂಗ್ ಆರಂಬಿಸಿದ ಲಂಕಾ ಬ್ಯಾಟರ್ಸ್ ಅಕ್ಷರಶಃ ಪರದಾಡಿದರು. ಧನಂಜಯ್ ಡಿಸಿಲ್ವ ( 7 ) ಚಮಿಕಾ ಕರುಣರತ್ನೆ (2) ಗಳಿಸಿ ಕ್ರಮವಾಗಿ ಮಿಷೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಗೆ ವಿಕೆಟ್ ನೀಡಿದರು. ದುಣಿತ್ ವೆಲ್ಲಾಲಗೆ 2 ರನ್ ಗಳಿಸಿ ರನ್ ಜೋಡಿಸುವ ಭರದಲ್ಲಿ ಪ್ಯಾಟ್ ಕಮ್ಮಿನ್ಸ್ ರನೌಟ್ ಮಾಡಿದರು. ಮಹೇಶ ತೀಕ್ಷಣ ಶೂನ್ಯಕ್ಕೆ ಝಾಂಪ ಗೆ ಎಲ್ ಬಿಡಬ್ಲ್ಯೂ ಆದರು. ಲಹಿರು ಕುಮಾರ 4 ರನ್ ಗೆ ಮಿಷೆಲ್ ಸ್ಟಾರ್ಕ್ ಗೆ ಬೌಲ್ಡ್ ಆಗಿ ಕ್ರೀಸ್ ತೊರೆದರು. ಒಂದು ಕೆಡೆ ವಿಕೆಟ್ ಗಳ ಪತನ ಆಗುತ್ತಿದ್ದರೂ ಚರಿತ್ ಹಸಲಂಕ 25 ರನ್ ಗಳಿಸಿ ಮೊತ್ತ ವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಗ್ಲೇನ್ ಮಾಕ್ಸ್ ವೆಲ್ ಗೆ ವಿಕೆಟ್ ಒಪ್ಪಿಸಿ 209 ಕ್ಕೆ ಶ್ರೀಲಂಕಾ ಆಲೌಟ್ ಆಯಿತು.
ಆಸ್ಟ್ರೇಲಿಯ ಪರ ಉತ್ತಮ ಪ್ರದರ್ಶನ ನೀಡಿದ ಆಡಂ ಝಾಂಪ 4 ವಿಕೆಟ್ ಕಬಳಿಸಿದರೆ, ಮಿಷೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ತಲಾ 2 ಹಾಗೂ ಗ್ಲೇನ್ ಮಾಕ್ಸ್ವೆಲ್ 1 ವಿಕೆಟ್ ಪಡೆದರು.







