ಆಸ್ಟ್ರೇಲಿಯನ್ ಓಪನ್ : ಅಮಂಡಾ ಅನಿಸಿಮೋವಾ, ಕೊಕೊ ಗೌಫ್ ನಾಲ್ಕನೇ ಸುತ್ತಿಗೆ ಲಗ್ಗೆ

ಅಮಂಡಾ ಅನಿಸಿಮೋವಾ | Photo: @BastienFachan \ X
ಮೆಲ್ಬರ್ನ್: ಎಂಟು ತಿಂಗಳ ವಿರಾಮದ ನಂತರ ಟೆನಿಸ್ ಗೆ ವಾಪಸಾಗಿರುವ ಅಮಂಡಾ ಅನಿಸಿಕೋವಾ ಹಾಗೂ ಅಮೆರಿಕನ್ ಓಪನ್ ಚಾಂಪಿಯನ್ ಕೊಕೊ ಗೌಫ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು ತಲುಪಿದ್ದಾರೆ.
ಅಮೆರಿಕದ ಆಟಗಾರ್ತಿ ಅನಿಸಿಮೋವಾ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಟೆನಿಸ್ ನಿಂದ ವಿರಾಮ ಪಡೆದಿದ್ದರು. 13ನೇ ಶ್ರೇಯಾಂಕದ ಲಿಯುಡ್ಮಿಲಾ ಸಮ್ಸೋನೋವಾರನ್ನು 6-3, 6-4 ನೇರ ಸೆಟ್ ಗಳ ಅಂತರದಿಂದ ಸೋಲಿಸಿ ಮೆಲ್ಬರ್ನ್ನಲ್ಲಿ ತನ್ನ ಅಭಿಯಾನ ಆರಂಭಿಸಿದ್ದರು.
ಮಾಜಿ ವಿಶ್ವದ ನಂ.21ನೇ ಆಟಗಾರ್ತಿ ಅನಿಸಿಮೋವಾ 2ನೇ ಸುತ್ತಿನಲ್ಲಿ ಅರ್ಜೆಂಟೀನದ ನಾಡಿಯಾ ಪೊಡೊರೋಸ್ಕಾರನ್ನು ಸೋಲಿಸಿದ್ದರು.
ಅನಿಸಿಮೋವಾ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ನ ಮೂರನೇ ಸುತ್ತಿನ ಪಂದ್ಯದಲ್ಲಿ ಮಾಜಿ ನಂ.2ನೇ ಆಟಗಾರ್ತಿ ಪೌಲಾ ಬಡೋಸಾರನ್ನು 7-5, 6-4 ನೇರ ಸೆಟ್ ಗಳ ಅಂತರದಿಂದ ಸುಲಭವಾಗಿ ಸೋಲಿಸಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದಾರೆ.
ಮೊದಲ ಸೆಟ್ಟನ್ನು 7-5 ಅಂತರದಿಂದ ಜಯಿಸಿರುವ ಅನಿಸಿಮೋವಾ ಈ ವರೆಗಿನ ಮೂರು ಸುತ್ತಿನ ಪಂದ್ಯಗಳಲ್ಲಿ ಒಂದೂ ಸೆಟನ್ನು ಸೋತಿಲ್ಲ. 2022ರಲ್ಲಿ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ನಂತರ ಇದೇ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು ತಲುಪಿದ್ದಾರೆ.
2019ರಲ್ಲಿ ಫ್ರೆಂಚ್ ಓಪನ್ನಲ್ಲಿ ಸೆಮಿ ಫೈನಲ್ ತಲುಪಿದ್ದ ಅನಿಸಿಮೋವಾ ಪ್ರಸ್ತುತ ವಿಶ್ವ ರ್ಯಾಂಕಿಂಗ್ ನಲ್ಲಿ 442ನೇ ಸ್ಥಾನದಲ್ಲಿದ್ದಾರೆ. ಮೂರನೇ ಬಾರಿ ಮೆಲ್ಬರ್ನ್ ಪಾರ್ಕ್ ನಲ್ಲಿ ನಾಲ್ಕನೇ ಸುತ್ತು ತಲುಪಿರುವ ಅನಿಸಿಮೋವಾ ರ್ಯಾಂಕಿಂಗ್ ನಲ್ಲಿ ಭಡ್ತಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಅನಿಸಿಮೋವಾ ಮುಂದಿನ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಅರ್ಯನಾ ಸಬಲೆಂಕಾ ಸವಾಲನ್ನು ಎದುರಿಸಲಿದ್ದಾರೆ.
ಗೌಫ್ ನಾಲ್ಕನೇ ರೌಂಡಿಗೆ ಲಗ್ಗೆ
ಇದೇ ವೇಳೆ ಮತ್ತೊಂದು ಮಹಿಳೆಯರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ ಕೊಕೊ ಗೌಫ್ ತಮ್ಮದೇ ದೇಶದ ಅಲಿಸಿಯಾ ಪಾರ್ಕ್ ವಿರುದ್ಧ 6-0, 6-2 ನೇರ ಸೆಟ್ ಗಳ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದರು.
ವರ್ಷದ ಮೊದಲ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ದೋಷರಹಿತ ದಾಖಲೆಯನ್ನು ಕಾಯ್ದುಕೊಂಡಿರುವ ವಿಶ್ವದ ನಂ.4ನೇ ಆಟಗಾರ್ತಿ ಗೌಫ್ ಟೂರ್ನಮೆಂಟ್ ನಲ್ಲಿ ಈ ತನಕ ಒಂದೂ ಸೆಟನ್ನು ಸೋತಿಲ್ಲ. ಮೆಲ್ಬರ್ನ್ನಲ್ಲಿ ತಾನೋರ್ವ ಪ್ರಬಲ ಸ್ಪರ್ಧಿ ಎಂದು ಪ್ರದರ್ಶನದ ಮೂಲಕ ಗೌಫ್ ತೋರಿಸಿಕೊಟ್ಟಿದ್ದಾರೆ. ಆದರೆ ಮೆಲ್ಬರ್ನ್ ಓಪನ್ನಲ್ಲಿ ಅವರು ಈ ತನಕ ನಾಲ್ಕನೇ ಸುತ್ತನ್ನು ದಾಟಿಲ್ಲ.
ನಾನು ಇಂದು ಆಡಿದ ರೀತಿಗೆ ತುಂಬಾ ಸಂತೋಷವಾಗಿದೆ. ಸ್ಕೋರ್ಲೈನ್ನಲ್ಲಿ ಸುಲಭ ಗೆಲುವು ಸಾಧಿಸದಂತೆ ಕಂಡುಬಂದಿದ್ದರೂ ಎದುರಾಳಿ ಆಟಗಾರ್ತಿ ತೀವ್ರ ಸವಾಲು ಒಡ್ಡಿದ್ದರು ಎಂದು 19ರ ಹರೆಯದ ಗೌಫ್ ಹೇಳಿದ್ದಾರೆ.
ಕೇವಲ 31 ನಿಮಿಷಗಳಲ್ಲಿ ಕೊನೆಗೊಂಡಿರುವ ಮೊದಲ ಸೆಟ್ ನ ಆರಂಭದಲ್ಲೇ ಗೌಫ್ 82ನೇ ರ್ಯಾಂಕ್ ನ ಎದುರಾಳಿಯ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಎರಡನೇ ಸೆಟ್ ನ ಆರಂಭದಲ್ಲಿ ಅಲಿಸಿಯಾ ಪಾರ್ಕ್ಸ್ ಒಂದಷ್ಟು ಪ್ರತಿರೋಧ ಒಡ್ಡಿದರು. ಗೌಫ್ ತನ್ನ ಹಿಡಿತ ಉಳಿಸಿಕೊಂಡು 5ನೇ ಗೇಮ್ ಮುರಿದು ಪಂದ್ಯವನ್ನು ಜಯಿಸಿದರು.
ಗೌಫ್ ಮುಂಬರುವ ನಾಲ್ಕನೇ ಸುತ್ತಿನಲ್ಲಿ ಪೋಲ್ಯಾಂಡ್ ನ ಮ್ಯಾಗ್ಡಲೀನಾ ಫ್ರೆಚ್ ಅಥವಾ ರಶ್ಯದ ಕ್ವಾಲಿಫೈಯರ್ ಆಟಗಾರ್ತಿ ಅನಸ್ತಾಸಿಯಾ ಜಖರೋವಾ ಸವಾಲನ್ನು ಎದುರಿಸಲಿದ್ದಾರೆ.







