ನಾಳೆ ಆಸ್ಟ್ರೇಲಿಯನ್ ಓಪನ್ಗೆ ಚಾಲನೆ: 15 ದಿನಗಳ ಕಾಲ ನಡೆಯಲಿರುವ ವರ್ಷದ ಪ್ರಥಮ ಗ್ರ್ಯಾನ್ಸ್ಲಾಮ್ ಟೆನಿಸ್ ಪಂದ್ಯಾವಳಿ

PC | x.com/AustralianOpen
ಮೆಲ್ಬರ್ನ್, ಜ. 17: ವರ್ಷದ ಪ್ರಥಮ ಗ್ರ್ಯಾನ್ಸ್ಲಾಮ್ ಟೆನಿಸ್ ಪಂದ್ಯಾವಳಿ ಆಸ್ಟ್ರೇಲಿಯನ್ ಓಪನ್ ರವಿವಾರ ಮೆಲ್ಬರ್ನ್ನಲ್ಲಿ ಆರಂಭಗೊಳ್ಳಲಿದೆ. ಹಾಲಿ ಪುರುಷರ ಸಿಂಗಲ್ಸ್ ಚಾಂಪಿಯನ್ ಇಟಲಿಯ ಜನ್ನಿಕ್ ಸಿನ್ನರ್ ಮತ್ತು ಹಾಲಿ ಮಹಿಳಾ ಸಿಂಗಲ್ಸ್ ಚಾಂಪಿಯನ್ ಅಮೆರಿಕದ ಮ್ಯಾಡಿಸನ್ ಕೀಸ್ ತಮ್ಮ ಪ್ರಶಸ್ತಿಗಳನ್ನು ಕಾಪಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಪಂದ್ಯಾವಳಿಯು 15 ದಿನಗಳ ಕಾಲ ನಡೆಯಲಿದೆ.
ಅದೇ ವೇಳೆ, ತನ್ನ ಕ್ರೀಡಾ ಬದುಕಿನಲ್ಲಿ ಈವರೆಗೆ ಮರೀಚಿಕೆಯಾಗಿರುವ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆಲ್ಲಲು ಆರು ಬಾರಿಯ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ವಿಜೇತ ಸ್ಪೇನ್ನ ಕಾರ್ಲೋಸ್ ಅಲ್ಕರಾಝ್ ತುದಿಗಾಲಲ್ಲಿ ನಿಂತಿದ್ದಾರೆ. ಅಗ್ರ ಶ್ರೆಯಾಂಕದ ಅವರು ಈವರೆಗೆ ಇತರ ಮೂರು ಗ್ರ್ಯಾನ್ಸ್ಲಾಮ್ ಪಂದ್ಯಾವಳಿಗಳಲ್ಲಿ (ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್) ತಲಾ ಎರಡು ಬಾರಿ ವಿಜೇತರಾದರೂ, ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯೊದನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಮಹಿಳಾ ಸಿಂಗಲ್ಸ್ನಲ್ಲಿ, ಬೆಲಾರುಸ್ನ ಅರೈನಾ ಸಬಲೆಂಕ ಮೆಲ್ಬರ್ನ್ನಲ್ಲಿ ತನ್ನ ಮೂರನೇ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದಾರೆ.
ಸರ್ಬಿಯದ ನೊವಾಕ ಜೊಕೊವಿಕ್ಗೆ ತನ್ನ ಯುವ ಎದುರಾಳಿಗಳನ್ನು ಸೋಲಿಸಿ ಪ್ರಶಸ್ತಿ ಗೆಲ್ಲಲು ಸಾಧ್ಯವಾದರೆ ಅದು ಅವರ ಕ್ರೀಡಾ ಬದುಕಿನ 25ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯಾಗುತ್ತದೆ. ಆ ಮೂಲಕ ಅವರು ಮಾರ್ಗರೆಟ್ ಕೋರ್ಟ್ ಅವರ ದಾಖಲೆಯನ್ನು ಹಿಂದಿಕ್ಕುತ್ತಾರೆ.
ವೀನಸ್ ವಿಲಿಯಮ್ಸ್ಗೆ ವೈಲ್ಡ್ಕಾರ್ಡ್ : ಆಸ್ಟ್ರೇಲಿಯನ್ ಓಪನ್ನಲ್ಲಿ ಆಡಲಿರುವ ಅತ್ಯಂತ ಹಿರಿಯ ಮಹಿಳೆ
ಆಸ್ಟ್ರೇಲಿಯ ಓಪನ್ನಲ್ಲಿ ಆಡಲು ವೈಲ್ಡ್ಕಾರ್ಡ್ (ನೇರಪ್ರವೇಶ) ಪಡೆದಿರುವ 45 ವರ್ಷದ ವೀನಸ್ ವಿಲಿಯಮ್ಸ್ ಗ್ರ್ಯಾನ್ ಸ್ಲಾಮ್ ಪಂದ್ಯಾವಳಿಯ ಪ್ರಧಾನ ಸುತ್ತಿನ ಸಿಂಗಲ್ಸ್ ವಿಭಾಗದಲ್ಲಿ ಆಡುವ ಅತ್ಯಂತ ಹಿರಿಯ ಮಹಿಳೆ ಎಂಬ ದಾಖಲೆಯನ್ನು ನಿರ್ಮಿಸಲು ಸಜ್ಜಾಗಿದ್ದಾರೆ.
ಏಳು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ವೀನಸ್ ತನಗೆ ವೈಲ್ಡ್ ಕಾರ್ಡ್ ನೀಡಿರುವುದಕ್ಕೆ ಆಸ್ಟ್ರೇಲಿಯನ್ ಓಪನ್ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವೀನಸ್ 16 ತಿಂಗಳ ವಿರಾಮದ ಬಳಿಕ, ಕಳೆದ ಋತುವಿನಲ್ಲಿ ಟೆನಿಸ್ಗೆ ಮರಳಿದ್ದರು. ಆ ಋತುವಿನಲ್ಲಿ ತನ್ನ ನಾಲ್ಕು ಟೂರ್ ಮಟ್ಟದ ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಪಡೆದಿದ್ದಾರೆ. 2026ರ ಋತುವಿನಲ್ಲಿ, ಕಳೆದ ವಾರ ನಡೆದ ಆಕ್ಲಂಡ್ ಕ್ಲಾಸಿಕ್ನಲ್ಲಿ ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದ ಅವರು ಮೊದಲ ಸುತ್ತಿನಲ್ಲೇ 53ನೇ ವಿಶ್ವ ರ್ಯಾಂಕಿಂಗ್ನ ಪೋಲ್ ಮ್ಯಾಗ್ಡ ಲಿನೆಟ್ ಎದುರು ಸೋಲನುಭವಿಸಿದ್ದಾರೆ.
576 ವಿಶ್ವ ರ್ಯಾಂಕಿಂಗ್ ಹೊಂದಿರುವ ವೀನಸ್ಗೆ ಹೋಬರ್ಟ್ ಇಂಟರ್ನ್ಯಾಶನಲ್ಗೂ ವೈಲ್ಡ್ಕಾರ್ಡ್ ಲಭಿಸಿತ್ತು. ಆ ಪಂದ್ಯದಲ್ಲೂ ಅವರು ಜರ್ಮನಿಯ 38 ವರ್ಷದ ಟತ್ಯಾನ ಮರಿಯ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲು ಕಂಡಿದ್ದಾರೆ.
ದಾಖಲೆಯ ಬಹುಮಾನ ಮೊತ್ತ
ಆಸ್ಟ್ರೇಲಿಯ ಓಪನ್ 2026ರ ಋತುವಿನಲ್ಲಿ ದಾಖಲೆಯ ಒಟ್ಟು 75 ಮಿಲಿಯ ಅಮೆರಿಕನ್ ಡಾಲರ್ (ಸುಮಾರು 680 ಕೋಟಿ ರೂಪಾಯಿ) ಮೊತ್ತವನ್ನು ಬಹುಮಾನವಾಗಿ ಕೊಡಲಾಗುವುದು.
ಬಹುಮಾನ ಮೊತ್ತವು ಕಳೆದ ವರ್ಷಕ್ಕೆ ಹೋಲಿಸಿದರೆ 16 ಶೇಕಡ ಹೆಚ್ಚಾಗಿದೆ. ಇದು ಫ್ರೆಂಚ್ ಓಪನ್ (65.42 ಮಿಲಿಯ ಡಾಲರ್) ಮತ್ತು ವಿಂಬಲ್ಡನ್ ಓಪನ್ (71.60 ಮಿಲಿಯ ಡಾಲರ್)ನ ಒಟ್ಟು ಬಹುಮಾನಕ್ಕಿಂತ ಹೆಚ್ಚಾಗಿದೆ, ಆದರೆ ಯುಎಸ್ ಓಪನ್ (90 ಮಿಲಿಯ ಡಾಲರ್)ನ ಬಹುಮಾನ ಮೊತ್ತಕ್ಕಿಂತ ಕಡಿಮೆಯಾಗಿದೆ.
ಪುರುಷ ಮತ್ತು ಮಹಿಳಾ ಸಿಂಗಲ್ಸ್ ಚಾಂಪಿಯನ್ನರು ತಲಾ 4.15 ಮಿಲಿಯ ಅಮೆರಿಕನ್ ಡಾಲರ್ (ಸುಮಾರು 37.64 ಕೋಟಿ ರೂಪಾಯಿ) ಪ್ರಶಸ್ತಿ ಮೊತ್ತವನ್ನು ಪಡೆಯಲಿದ್ದಾರೆ. ಇದು 2025ರ ಮೊತ್ತಕ್ಕೆ ಹೋಲಿಸಿದರೆ 19 ಶೇಕಡ ಏರಿಕೆಯಾಗಿದೆ.







