ಆಸ್ಟ್ರೇಲಿಯನ್ ಓಪನ್: ಕರೋಲಿನ್ ವೋಝ್ನಿಯಾಕಿ ಶುಭಾರಂಭ

ಕರೋಲಿನ್ ವೋಝ್ನಿಯಾಕಿ | Photo: PTI
ಮೆಲ್ಬರ್ನ್: ವಿಶ್ವದ ಮಾಜಿ ನಂ.1 ಆಟಗಾರ್ತಿ ಕರೋಲಿನ್ ವೋಝ್ನಿಯಾಕಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ತಲುಪಿದ್ದಾರೆ.
ಎದುರಾಳಿ ಪೋಲ್ಯಾಂಡ್ ನ ಆಟಗಾರ್ತಿ ಮಗ್ದಾ ಲಿನೆಟ್ ಗಾಯಗೊಂಡು ನಿವೃತ್ತಿಯಾದ ಕಾರಣ 2018ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ವೋಝ್ನಿಯಾಕಿ ಮುಂದಿನ ಸುತ್ತಿಗೇರಿದರು.
20ನೇ ಶ್ರೇಯಾಂಕದ ಲಿನೆಟ್ ಸ್ಪರ್ಧೆಯಿಂದ ಹಿಂದೆ ಸರಿದಾಗ ವೋಝ್ನಿಯಾಕಿ 6-2, 2-0 ಮುನ್ನಡೆಯಲ್ಲಿದ್ದರು. ವೋಝ್ನಿಯಾಕಿ ಕಳೆದ ವರ್ಷ ನಾರ್ತ್ ಅಮೆರಿಕ ಹಾರ್ಡ್ ಕೋರ್ಟ್ ಟೂರ್ನಿಯ ವೇಳೆ ತನ್ನ ನಿವೃತ್ತಿಯ ನಿರ್ಧಾರವನ್ನು ಹಿಂಪಡೆದಿದ್ದರು. ಯು.ಎಸ್. ಓಪನ್ ನಲ್ಲಿ ಅಂತಿಮ-16ರ ಸುತ್ತನ್ನು ತಲುಪಿದ್ದರು.
2020ರಲ್ಲಿ ಅಧಿಕೃತವಾಗಿ ಟೆನಿಸ್ ಗೆ ವಿದಾಯ ಹೇಳಿದ್ದ ವೋಝ್ನಿಯಾಕಿ, ಮೆಲ್ಬರ್ನ್ ಪಾರ್ಕ್ ಗೆ ವಾಪಸಾಗಿದ್ದಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಏಕೈಕ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ ನಂತರ ಆರು ವರ್ಷಗಳ ನಂತರ ಮೆಲ್ಬರ್ನ್ ಗೆ ವೋಝ್ನಿಯಾಕಿ ಪುನರಾಗಮನ ಮಾಡಿದ್ದಾರೆ.
ಕಳೆದ ವರ್ಷ ಸೆಮಿ ಫೈನಲ್ ಗೆ ತಲುಪಿದ್ದ ಲೆನೆಟ್ 2-5ರಿಂದ ಹಿನ್ನಡೆಯಲ್ಲಿದ್ದಾಗ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರು. ಎರಡನೇ ಸೆಟ್ ನ ಆರಂಭದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದರು.ವೋಝ್ನಿಯಾಕಿ ಎರಡನೇ ಸುತ್ತಿನಲ್ಲಿ 20ರ ಹರೆಯದ ಕ್ವಾಲಿಫೈಯರ್ ಮರಿಯಾ ಟಿಮೊಫೀವಾರನ್ನು ಎದುರಿಸಲಿದ್ದಾರೆ.
ಮೊದಲ ಸುತ್ತಿನಲ್ಲಿ ಜನ್ನಿಕ್ ಸಿನ್ನೆರ್ ಗೆ ಜಯ
ಡಚ್ ಆಟಗಾರ ಬೋಟಿಕ್ ವಿರುದ್ಧ ಪ್ರಯಾಸದ ಗೆಲುವು ದಾಖಲಿಸಿರುವ ಇಟಲಿಯ ಜನ್ನಿಕ್ ಸಿನ್ನೆರ್ ಆಸ್ಟ್ರೇಲಿಯನ್ ಓಪನ್ನ ಸೆಮಿ ಫೈನಲ್ ನಲ್ಲಿ ನೊವಾಕ್ ಜೊಕೊವಿಕ್ರನ್ನು ಎದುರಿಸುವ ಗುರಿ ಇಟ್ಟುಕೊಂಡಿದ್ದಾಗಿ ಹೇಳಿದ್ದಾರೆ.
4ನೇ ಶ್ರೇಯಾಂಕದ ಸಿನ್ನೆರ್ ರವಿವಾರ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ 59ನೇ ರ್ಯಾಂಕಿನ ಬೋಟಿಕ್ರನ್ನು 6-4, 7-5, 6-3 ಅಂತರದಿಂದ ಸೋಲಿಸಿದರು. ಈ ಮೂಲಕ ಮೆಲ್ಬರ್ನ್ ಪಾರ್ಕ್ ನಲ್ಲಿ 2024ರ ಅಭಿಯಾನವನ್ನು ಆರಂಭಿಸಿದರು.
2023ರಲ್ಲಿ ಟೊರೊಂಟೊದಲ್ಲಿ ತನ್ನ ಚೊಚ್ಚಲ ಮಾಸ್ಟರ್ಸ್ ಪ್ರಶಸ್ತಿ ಜಯಿಸಿದ್ದ ಸಿನ್ನೆರ್ ಎಟಿಪಿ ಫೈನಲ್ಸ್ ನಲ್ಲಿ ಜೊಕೊವಿಕ್ ವಿರುದ್ಧ ಪಂದ್ಯ ಆಡಿದ್ದರು. ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವ ವಿಶ್ವಾಸ ಮೂಡಿಸಿದ್ದರು.
ಪೂರ್ವ ತಯಾರಿ ಟೂರ್ನಮೆಂಟ್ನಿಂದ ಹೊರಗುಳಿದಿದ್ದ ಸಿನ್ನೆರ್ ಈ ವರ್ಷ ಆಡಿರುವ ಮೊದಲ ಟೂರ್ನಿ ಇದಾಗಿದೆ. ಒಂದು ವೇಳೆ ಸಿನ್ನೆರ್ ಸೆಮಿ ಫೈನಲ್ ತಲುಪಿದರೆ 10 ಬಾರಿಯ ಚಾಂಪಿಯನ್ ಜೊಕೊವಿಕ್ರನ್ನು ಎದುರಿಸಲಿದ್ದಾರೆ.







