ಆಸ್ಟ್ರೇಲಿಯನ್ ಓಪನ್: ಜಪಾನ್ ಆಟಗಾರ್ತಿ ನವೊಮಿ ಒಸಾಕಾ ನಿವೃತ್ತಿ

PC : sports.ndtv
ಮೆಲ್ಬರ್ನ್, ಜ.24: ಗಾಯದ ಸಮಸ್ಯೆಯಿಂದಾಗಿ ಜಪಾನ್ ಆಟಗಾರ್ತಿ ನವೊಮಿ ಒಸಾಕಾ ಈಗ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಮೂರನೇ ಸುತ್ತಿನ ಪಂದ್ಯದಿಂದ ಹೊರಗುಳಿದರು.
ಪಂದ್ಯ ಆರಂಭವಾಗಲು ಕೆಲವೇ ಗಂಟೆಗಳಿರುವಾಗ ಸಾಮಾಜಿಕ ಮಾಧ್ಯಮದಲ್ಲಿ ಒಸಾಕಾ ಈ ಘೋಷಣೆ ಮಾಡಿದರು.
‘‘ಎರಡನೇ ಸುತ್ತಿನ ಪಂದ್ಯದ ನಂತರ ಕಾಣಿಸಿಕೊಂಡಿರುವ ಗಾಯದ ಸಮಸ್ಯೆಯಿಂದಾಗಿ ಮೂರನೇ ಸುತ್ತಿನ ಪಂದ್ಯದಿಂದ ಹಿಂದೆ ಸರಿಯುವ ಕಠಿಣ ನಿರ್ಧಾರಕ್ಕೆ ಬಂದಿರುವೆ. ನಾನು ಇನ್ನಷ್ಟು ಅಪಾಯವನ್ನು ತಂದುಕೊಳ್ಳಲು ಬಯಸುವುದಿಲ್ಲ’’ ಎಂದು ಒಸಾಕಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
ಎರಡು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಒಸಾಕಾ ಎರಡನೇ ಸುತ್ತಿನಲ್ಲಿ ರೊಮಾನಿಯಾದ ಸೊರಾನ ಸಿರ್ಸ್ಟಿಯಾರನ್ನು ಸೋಲಿಸಿದ್ದರು.
ಜಪಾನ್ನ ಸ್ಟಾರ್ ಆಟಗಾರ್ತಿ ಮೂರನೇ ಸುತ್ತಿನಲ್ಲಿ ಆಸ್ಟ್ರೇಲಿಯದ ಮ್ಯಾಡಿಸನ್ ಇಂಗ್ಲಿಸ್ರನ್ನು ಎದುರಿಸಬೇಕಾಗಿತ್ತು. ಆದರೆ ಒಸಾಕಾ ಹಿಂದೆ ಸರಿದಿರುವ ಕಾರಣ ಇಂಗ್ಲಿಸ್ ಅವರು 2022ರ ನಂತರ ಅಸ್ಟ್ರೇಲಿಯನ್ ಓಪನ್ನ ಅಂತಿಮ-16ರ ಸುತ್ತಿಗೆ ತೇರ್ಗಡೆಯಾದ ಆಸ್ಟ್ರೇಲಿಯದ ಮೊದಲ ಆಟಗಾರ್ತಿಯಾಗಿದ್ದಾರೆ. 2022ರಲ್ಲಿ ಅಶ್ಲೆ ಬಾರ್ಟಿ ಈ ಸಾಧನೆ ಮಾಡಿದ್ದರು.
ಇಂಗ್ಲಿಸ್ ಅವರು ಕ್ವಾರ್ಟರ್ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಲು ಆರು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಇಗಾ ಸ್ವಿಯಾಟೆಕ್ರನ್ನು ಎದುರಿಸಲಿದ್ದಾರೆ.
ಜೊಕೊವಿಕ್, ಸಿನ್ನರ್, ಮಿನೌರ್, ಅನಿಸಿಮೋವಾ ಪ್ರಿ-ಕ್ವಾರ್ಟರ್ ಫೈನಲ್ಗೆ
ನೊವಾಕ್ ಜೊಕೊವಿಕ್, ಜನ್ನಿಕ್ ಸಿನ್ನರ್, ಅಲೆಕ್ಸ್ ಡಿ ಮಿನೌರ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ.
ವಿಪರೀತ ಉಷ್ಣಾಂಶದ ನಡುವೆ ಆಡಿದ ಜೊಕೊವಿಕ್ ಡಚ್ನ ಬೊಟಿಕ್ ವ್ಯಾನ್ ಡಿ ಅವರನ್ನು 6-3, 6-4, 7-6(4) ಸೆಟ್ಗಳ ಅಂತರದಿಂದ ಮಣಿಸಿ ನಾಲ್ಕನೇ ಸುತ್ತಿಗೆ ತಲುಪಿದರು.
ಗ್ರ್ಯಾನ್ಸ್ಲಾಮ್ನಲ್ಲಿ 400 ಪಂದ್ಯ ಗೆದ್ದ ಮೊದಲ ಆಟಗಾರ ಜೊಕೊವಿಕ್
ಮೆಲ್ಬರ್ನ್ನಲ್ಲಿ 102ನೇ ಪಂದ್ಯವನ್ನು ಗೆದ್ದಿರುವ ಜೊಕೊವಿಕ್ ಆರು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ದಾಖಲೆಯನ್ನು ಸರಿಗಟ್ಟಿದರು. ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ 400 ಪಂದ್ಯಗಳನ್ನು ಗೆದ್ದಿರುವ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಮುಂದಿನ ಸುತ್ತಿನಲ್ಲಿ 16ನೇ ಶ್ರೇಯಾಂಕದ ಜಾಕಬ್ ಮೆನ್ಸಿಕ್ರನ್ನು ಎದುರಿಸಲಿದ್ದಾರೆ.
ಎರಡು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸಿನ್ನರ್ ಮೂರು ಗಂಟೆ, 45 ನಿಮಿಷಗಳ ಕಾಲ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.85ನೇ ಆಟಗಾರ ಎಲಿಯೊಟ್ ಸ್ಪಿಝಿರ್ರಿ ಅವರನ್ನು 4-6, 6-3, 6-4, 6-4 ಸೆಟ್ಗಳ ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಇಟಲಿ ಆಟಗಾರ ಲುಸಿಯಾನೊ ಡಾರ್ಡೆರಿ ಅವರನ್ನು ಎದುರಿಸಲಿದ್ದಾರೆ.
ಮಿನೌರ್ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ನ ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಫ್ರಾನ್ಸಿಸ್ ಟಿಯಫೊರನ್ನು 6-3, 6-4, 7-5 ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ಸತತ ಐದನೇ ವರ್ಷ ನಾಲ್ಕನೇ ಸುತ್ತಿಗೆ ತಲುಪಿದ್ದಾರೆ.
ಆರನೇ ಶ್ರೇಯಾಂಕದ ಮಿನೌರ್ ವೃತ್ತಿಪರ ಟೆನಿಸ್ ಯುಗದಲ್ಲಿ ಸತತ ಐದನೇ ವರ್ಷ ಅಂತಿಮ-16ರ ಸುತ್ತು ತಲುಪಿದ ಆಸ್ಟ್ರೇಲಿಯದ ಎರಡನೇ ಆಟಗಾರನಾಗಿದ್ದಾರೆ. 1969-76ರಲ್ಲಿ ಜಾನ್ ನ್ಯೂಕಾಂಬ್ ಪಂದ್ಯಾವಳಿಯಲ್ಲಿ ಅಂತಿಮ-16ರ ಸುತ್ತನ್ನು ತಲುಪಿದ್ದರು.
ಮೂರು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಸ್ಟ್ಯಾನ್ ವಾವ್ರಿಂಕ ಅಮೆರಿಕದ ಟೇಲರ್ ಫ್ರಿಟ್ಝ್ ವಿರುದ್ಧ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದರು.
1978ರ ನಂತರ ಪ್ರಸಕ್ತ ಟೂರ್ನಿಯಲ್ಲಿ ಮೂರನೇ ಸುತ್ತು ತಲುಪಿದ ಹಿರಿಯ ಆಟಗಾರನಾಗಿದ್ದ ವಾವ್ರಿಂಕ ವಿರುದ್ಧ ಟೇಲರ್ ಅವರು ಎರಡು ಗಂಟೆ, 46 ನಿಮಿಷಗಳ ಹೋರಾಟದಲ್ಲಿ 7-6(5), 2-6, 6-4, 6-4 ಸೆಟ್ಗಳ ಅಂತರದಿಂದ ಜಯಶಾಲಿಯಾದರು.
ಮಹಿಳೆಯರ ಸಿಂಗಲ್ಸ್ನ ಮೂರನೇ ಸುತ್ತಿನ ಪಂದ್ಯದಲ್ಲಿ ಅನಿಸಿಮೋವಾ ಅವರು ತಮ್ಮದೇ ದೇಶದ ಪೇಟನ್ ಸ್ಟಿಯರ್ನ್ಸ್ ವಿರುದ್ಧ 6-1, 6-4 ನೇರ ಸೆಟ್ಗಳ ಅಂತರದಿಂದ ಜಯಶಾಲಿಯಾದರು.
ನಾಲ್ಕನೇ ಶ್ರೇಯಾಂಕದ ಅನಿಸಿಮೋವಾ ಮೆಲ್ಬರ್ನ್ ಪಾರ್ಕ್ನಲ್ಲಿ 71 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿದರು.
24ರ ವಯಸ್ಸಿನ ಅನಿಸಿಮೋವಾ ಮುಂದಿನ ಸುತ್ತಿನಲ್ಲಿ ಝೆಕ್ ಗಣರಾಜ್ಯದ ಲಿಂಡಾ ನೊಸ್ಕೊವಾ ಅಥವಾ ಚೀನಾದ ವಾಂಗ್ ಕ್ಸಿನ್ಯುರನ್ನು ಎದುರಿಸಲಿದ್ದಾರೆ.
2025ರಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದ ಅನಿಸಿಮೋವಾ ಅವರು ವಿಂಬಲ್ಡನ್ ಹಾಗೂ ಯು.ಎಸ್. ಓಪನ್ ಟೂರ್ನಿಯಲ್ಲಿ ಫೈನಲ್ಗೆ ತಲುಪಿದ್ದರು.
ಯೂಕಿ ಭಾಂಬ್ರಿ, ಗೊರಾನ್ಸನ್ ಅಂತಿಮ-16ರ ಸುತ್ತಿಗೆ ಲಗ್ಗೆ
ಭಾರತದ ಯೂಕಿ ಭಾಂಬ್ರಿ ಹಾಗೂ ಸ್ವೀಡನ್ನ ಆಂಡ್ರೆ ಗೊರಾನ್ಸನ್ ಆಸ್ಟ್ರೇಲಿಯನ್ ಓಪನ್ನ ಪುರುಷರ ಡಬಲ್ಸ್ ಸ್ಪರ್ಧಾವಳಿಯಲ್ಲಿ ಮೂರನೇ ಸುತ್ತು ತಲುಪಿದ್ದಾರೆ.
ಭಾಂಬ್ರಿ ಹಾಗೂ ಗೊರಾನ್ಸನ್ ಮೆಕ್ಸಿಕೊದ ಸ್ಯಾಂಟಿಯಾಗೊ ಗೊಂಝಾಲೆಝ್ ಹಾಗೂ ಡಚ್ನ ಡೇವಿಡ್ ಪೆಲ್ರನ್ನು 4-6, 7-6(5),6-3 ಸೆಟ್ಗಳ ಅಂತರದಿಂದ ಮಣಿಸಿದರು.
ಶನಿವಾರ ಮೆಲ್ಬರ್ನ್ ಪಾರ್ಕ್ನಲ್ಲಿ ಹೀಟ್ ರೂಲ್ ಜಾರಿಗೆ ಬಂದ ಕಾರಣ ಸುಮಾರು ನಾಲ್ಕು ಗಂಟೆ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಭಾಂಬ್ರಿ ಜೋಡಿ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಬ್ರೆಝಿಲ್ನ ಒರ್ಲಾಂಡೊ ಲುಝ್ ಹಾಗೂ ರಫೆಲ್ ಮಾಟೊಸ್ರನ್ನು ಎದುರಿಸಲಿದ್ದಾರೆ.
73 ನಿಮಿಷಗಳಲ್ಲಿ ಕೊನೆಗೊಂಡ ಇನ್ನೊಂದು ಪುರುಷರ ಡಬಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಶ್ರೀರಾಮ್ ಬಾಲಾಜಿ ಹಾಗೂ ಆಸ್ಟ್ರೀಯದ ನೀಲ್ ಒಬರ್ಲೀಟ್ನರ್ ನಾಲ್ಕನೇ ಶ್ರೇಯಾಂಕದ ಮಾರ್ಸೆಲೊ ಅರೆವಾಲೊ ಹಾಗೂ ಮ್ಯಾಟ್ ಪಾವಿಕ್ ವಿರುದ್ಧ 5-7, 1-6 ಸೆಟ್ಗಳ ಅಂತರದಿಂದ ಸೋತಿದ್ದಾರೆ.







