ಆಸ್ಟ್ರೇಲಿಯನ್ ಓಪನ್ | ಪಿ.ವಿ ಸಿಂಧು, ತನ್ವಿ ಶರ್ಮಾ ಕ್ವಾರ್ಟರ್ ಫೈನಲ್ಗೆ ಲಗ್ಗೆ

ತನ್ವಿ ಶರ್ಮಾ , ಪಿ.ವಿ ಸಿಂಧು | Photo Credit : X \ @BAI_Media
ಸಿಡ್ನಿ, ಜೂ.11: ಭಾರತದ ಹಿರಿಯ ಆಟಗಾರ್ತಿ ಪಿ.ವಿ. ಸಿಂಧು ಹಾಗೂ ಯುವ ಆಟಗಾರ್ತಿ ತನ್ವಿ ಶರ್ಮಾ ಆಸ್ಟ್ರೇಲಿಯನ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಗುರುವರ ತಮ್ಮ ಎದುರಾಳಿಗಳ ವಿರುದ್ಧ ನೇರ ಗೇಮ್ಗಳ ಅಂತರದಿಂದ ಜಯಶಾಲಿಯಾಗಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ.
ಮೂರನೇ ಶ್ರೇಯಾಂಕದ ಸಿಂಧು 42 ನಿಮಿಷಗಳ ಕಾಲ ನಡೆದ ಅಂತಿಮ-16ರ ಪಂದ್ಯದಲ್ಲಿ ತಮ್ಮದೇ ದೇಶದ ಇಶಾರಾಣಿ ಬರುವಾರನ್ನು 22-20, 21-12 ನೇರ ಗೇಮ್ಗಳ ಅಂತರದಿಂದ ಮಣಿಸಿದರು.
ಇಬ್ಬರು ಭಾರತೀಯರ ನಡುವೆ ನಡೆದ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 17ರ ಹರೆಯದ ತನ್ವಿ ಅವರು ಮಾಳವಿಕಾ ಬನ್ಸೋಡ್ರನ್ನು 21-13, 21-15 ನೇರ ಗೇಮ್ಗಳ ಅಂತರದಿಂದ ಮಣಿಸಿದರು. ತನ್ವಿ ಬುಧವಾರ ಚೈನೀಸ್ ತೈಪೆಯ ಐದನೇ ಶ್ರೇಯಾಂಕದ ಹಾಗೂ ವಿಶ್ವದ ನಂ.11ನೇ ಆಟಗಾರ್ತಿ ಚಿಯು ಪಿನ್-ಚಿಯಾನ್ರನ್ನು ಮಣಿಸಿ ಶಾಕ್ ನೀಡಿದ್ದರು.
ಸಿಂಧು ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ಚೆನ್ ಸು ಯು ಅವರನ್ನು ಎದುರಿಸಲಿದ್ದಾರೆ. ಅದರೆ, ತನ್ವಿಗೆ ಕಠಿಣ ಪಂದ್ಯ ಎದುರಾಗಲಿದ್ದು, ಅವರು ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ನ ಅಗ್ರ ಶ್ರೇಯಾಂಕದ ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ.
ತನ್ವಿ ಹೇಮಂತ್ ಸವಾಲು ಅಂತ್ಯವಾಗಿದ್ದು, ಅವರು ಥಾಯ್ಲೆಂಡ್ನ ಎರಡನೇ ಶ್ರೇಯಾಂಕದ ಪೋರ್ನ್ಪಾವೀ ಚೋಚುವಾಂಗ್ ವಿರುದ್ಧ 12-21, 15-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಆಸ್ಟ್ರೇಲಿಯದ ಜೋಡಿ ಮೈಕಲ್ ಓವೆನ್ ಹಾಗೂ ಡಿಲಾನ್ ಸೊಯೆಜಾಸಾ ವಿರುದ್ಧ 21-17, 21-7 ಗೇಮ್ಗಳ ಅಂತರದಿಂದ ಜಯಶಾಲಿಯಾಗಿರುವ ಭಾರತದ ಪುರುಷರ ಡಬಲ್ಸ್ ಜೋಡಿ ಹರಿಹರನ್ ಹಾಗೂ ಎಂ.ಆರ್. ಅರ್ಜುನ್ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ.
ಹರಿಹರನ್ ಹಾಗೂ ಅರ್ಜುನ್ ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ಚೆನ್ ಚೆಂಗ್ ಕುಯನ್ ಹಾಗೂ ಲಿಯು ಕುಯಾಂಗ್ ಹೆಂಗ್ರನ್ನು ಎದುರಿಸಲಿದ್ದಾರೆ.
ಆದರೆ ಭಾರತದ ಮಿಕ್ಸೆಡ್ ಡಬಲ್ಸ್ ಜೋಡಿ ಧ್ರುವ ರಾವತ್ ಹಾಗೂ ಕೆ.ಮನೀಶಾ ಜಪಾನಿನ ಅಕಿರಾ ಕೋಗಾ ಹಾಗೂ ನಾಟ್ಸು ಸೈಟೊರನ್ನು ಎರಡನೇ ಸುತ್ತಿನ ಪಂದ್ಯದಲ್ಲಿ ಮಣಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.






