ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ಮೊದಲ ಬಾರಿ ಫೈನಲ್ಗೆ ತಲುಪಿದ ಅಲ್ಕರಾಝ್

ಅಲೆಕ್ಸಾಂಡರ್ ಝ್ವೆರೆವ್ | Photo Credit : PTI
ಮೆಲ್ಬರ್ನ್, ಜ.30: ಐದು ಸೆಟ್ಗಳ ಸೆಮಿ ಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್ ಝ್ವೆರೆವ್ರನ್ನು ಮಣಿಸಿದ ಕಾರ್ಲೊಸ್ ಅಲ್ಕರಾಝ್ ಇದೇ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
22ರ ವಯಸ್ಸಿನ ಸ್ಪೇನ್ ಆಟಗಾರ ಅಲ್ಕರಾಝ್ ಮುಕ್ತ ಟೆನಿಸ್ ಯುಗದಲ್ಲಿ ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಪಂದ್ಯಾವಳಿಗಳಲ್ಲಿ ಫೈನಲ್ಗೆ ತಲುಪಿದ ಕಿರಿಯ ವಯಸ್ಸಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ವೃತ್ತಿಜೀವನದಲ್ಲಿ ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ ಕಿರಿಯ ಆಟಗಾರ ಎನಿಸಿಕೊಳ್ಳಲು ಅಲ್ಕರಾಝ್ ಇನ್ನೊಂದು ಪಂದ್ಯದಲ್ಲಿ ಗೆಲ್ಲುವ ಅಗತ್ಯವಿದೆ.
ಶುಕ್ರವಾರ ಐದು ಗಂಟೆ ಹಾಗೂ 27 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಪಂದ್ಯದಲ್ಲಿ ಅಲ್ಕರಾಝ್ ಅವರು ಜರ್ಮನಿ ಆಟಗಾರ ಝ್ವೆರೆವ್ರನ್ನು 6-4, 7-6(5), 6-7(3), 6-7(4), 7-5 ಸೆಟ್ಗಳ ಅಂತರದಿಂದ ಮಣಿಸಿದರು.
ಆರಂಭದಲ್ಲಿ ಪ್ರಾಬಲ್ಯ ಮೆರೆದ ಅಲ್ಕರಾಝ್, ಪಂದ್ಯವು ನಾಟಕೀಯ ತಿರುವು ಪಡೆಯುವ ಮೊದಲು ಬೇಗನೆ ಗೆಲುವು ದಾಖಲಿಸುವ ವಿಶ್ವಾಸ ಮೂಡಿಸಿದ್ದರು. ಮೂರನೇ ಸೆಟ್ನ 9ನೇ ಗೇಮ್ನಲ್ಲಿ ಬಲಗಾಲಿನಲ್ಲಿ ನೋವು ಕಾಣಿಸಿಕೊಂಡು ಕುಂಟ ತೊಡಗಿದರು. ಆಗ ಟ್ರೈನರ್ರಿಂದ ವೈದ್ಯಕೀಯ ಉಪಚಾರ ಪಡೆದು ಚೇತರಿಸಿಕೊಂಡರು. ಝ್ವೆರೆವ್ ಅವರು ಪಂದ್ಯಕ್ಕೆ ಅಡಚಣೆ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಂದ್ಯಾವಳಿಯ ಅಧಿಕಾರಿಯ ಬಳಿ ತನ್ನ ಹತಾಶೆ ತೋಡಿಕೊಂಡರು.
ನಾಲ್ಕು ಗಂಟೆಗೂ ಅಧಿಕ ಸಮಯ ಸಾಗಿದ ಪಂದ್ಯದಲ್ಲಿ ವಿಶ್ವದ ನಂ.3ನೇ ಆಟಗಾರ ಹಾಗೂ 2025ರ ಆಸ್ಟ್ರೇಲಿಯನ್ ಓಪನ್ನಲ್ಲಿ ರನ್ನರ್ ಅಪ್ ಆಗಿದ್ದ ಝ್ವೆರೆವ್ ನಾಲ್ಕನೇ ಸೆಟ್ನಲ್ಲಿ ಹಿಡಿತ ಸಾಧಿಸಿದರು. ಟೈಬ್ರೇಕರ್ನ ಮೂಲಕ 7-6(4)ಅಂತರದಿಂದ ಜಯಶಾಲಿಯಾಗಿ ಪಂದ್ಯವನ್ನು ಐದನೇ ಹಾಗೂ ನಿರ್ಣಾಯಕ ಸೆಟ್ಗೆ ವಿಸ್ತರಿಸಿದರು. 2026ರ ಪಂದ್ಯಾವಳಿಯಲ್ಲಿ ಸೆಂಟರ್ ಕೋರ್ಟ್ನಲ್ಲಿ ಇದೇ ಮೊದಲ ಬಾರಿ ಐದು ಸೆಟ್ಗಳ ಪಂದ್ಯವನ್ನು ಆಡಲಾಯಿತು. ಐದನೇ ಗೇಮ್ ಅನ್ನು 7-5ರಿಂದ ರೋಚಕವಾಗಿ ಗೆದ್ದುಕೊಂಡ ಅಲ್ಕರಾಝ್ ಅವರು ಫೈನಲ್ಗೆ ಟಿಕೆಟ್ ಗಿಟ್ಟಿಸಿಕೊಂಡರು.
ಅಲ್ಕರಾಝ್ ಮುಂದಿನ ಸುತ್ತಿನಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಅಥವಾ10 ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ನೊವಾಕ್ ಜೊಕೊವಿಕ್ರನ್ನು ಎದುರಿಸಲಿದ್ದಾರೆ.







