ಆಸ್ಟ್ರೇಲಿಯದ ಸ್ಪಿನ್ನರ್ ಝಂಪಾ ಐತಿಹಾಸಿಕ ಸಾಧನೆ

ಆ್ಯಡಮ್ ಝಂಪಾ | Photo Credit : PTI
ಹರಾರೆ, ಸೆ. 19: ಏಕದಿನ ಕ್ರಿಕೆಟ್ ನಲ್ಲಿ 200 ವಿಕೆಟ್ಗಳನ್ನು ಪಡೆದ ಆಸ್ಟ್ರೇಲಿಯದ ಎರಡನೇ ಸ್ಪಿನ್ನರ್ ಎನಿಸಿಕೊಂಡಿರುವ ಆ್ಯಡಮ್ ಝಂಪಾ ಅವರು ಶೇನ್ ವಾರ್ನ್ ಕ್ಲಬ್ಗೆ ಸೇರಿದರು.
ಶತಕ ಗಳಿಸಿ ಫಾರ್ಮ್ ಗೆ ಮರಳಿರುವ ಟ್ರಾವಿಸ್ ಹೆಡ್ ಅವರ ನೆರವಿನಿಂದ ಆಸ್ಟ್ರೇಲಿಯ ತಂಡವು ಹರಾರೆಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಝಿಂಬಾಬ್ವೆ ತಂಡವನ್ನು 84 ರನ್ಗಳಿಂದ ಮಣಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2–0 ಅಂತರದಿಂದ ಗೆದ್ದುಕೊಂಡಿತು.
357 ರನ್ ಗುರಿ ಬೆನ್ನಟ್ಟಿದ ಝಿಂಬಾಬ್ವೆ ತಂಡದ ವಿರುದ್ಧ 9 ಓವರ್ಗಳಲ್ಲಿ 62 ರನ್ಗೆ ಎರಡು ವಿಕೆಟ್ಗಳನ್ನು ಉರುಳಿಸಿದ ಝಂಪಾ ಈ ಮೈಲಿಗಲ್ಲು ತಲುಪಿದರು.
ಲೆಗ್ ಸ್ಪಿನ್ನರ್ ಝಂಪಾ ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ಗಳನ್ನು ಪಡೆದ ಆಸ್ಟ್ರೇಲಿಯದ ಏಳನೇ ಬೌಲರ್ ಎನಿಸಿಕೊಂಡರು. ಇದರೊಂದಿಗೆ ಗ್ಲೆನ್ ಮೆಕ್ಗ್ರಾತ್ ಅವರಿದ್ದ ಎಲೈಟ್ ಗುಂಪಿಗೆ ಸೇರಿದರು. 380 ವಿಕೆಟ್ಗಳನ್ನು ಪಡೆದಿರುವ ಮೆಕ್ಗ್ರಾತ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯದ ಎಲೈಟ್ ಸ್ಪಿನ್ ಕ್ಲಬ್ ಗೆ ಝಂಪಾ: ಝಂಪಾ ಇದೀಗ 123 ಏಕದಿನ ಪಂದ್ಯಗಳಲ್ಲಿ 29.48ರ ಸರಾಸರಿಯಲ್ಲಿ ಒಟ್ಟು 201 ವಿಕೆಟ್ಗಳನ್ನು ಪಡೆದಿದ್ದಾರೆ. ಇದರಲ್ಲಿ 12 ನಾಲ್ಕು ವಿಕೆಟ್ ಗೊಂಚಲು ಹಾಗೂ ಒಂದು ಐದು ವಿಕೆಟ್ ಗೊಂಚಲು ಸೇರಿದೆ.
ವಾರ್ನ್ 193 ಪಂದ್ಯಗಳಲ್ಲಿ 291 ವಿಕೆಟ್ಗಳನ್ನು ಉರುಳಿಸಿ ಆಸ್ಟ್ರೇಲಿಯದ ಅಗ್ರಮಾನ್ಯ ಏಕದಿನ ಸ್ಪಿನ್ನರ್ ಆಗಿದ್ದಾರೆ. ಮೆಕ್ಗ್ರಾತ್ ಏಕದಿನ ಮಾದರಿಯ ಕ್ರಿಕೆಟ್ನಲ್ಲಿ ದೇಶದ ಗರಿಷ್ಠ ವಿಕೆಟ್ ಸರದಾರನಾಗಿದ್ದಾರೆ.
ಫಾರ್ಮ್ ಗೆ ಮರಳಿದ ಹೆಡ್: ಕೇವಲ 84 ಎಸೆತಗಳಲ್ಲಿ 15 ಬೌಂಡರಿ ಹಾಗೂ ಮೂರು ಸಿಕ್ಸರ್ಗಳ ಸಹಿತ 112 ರನ್ ಗಳಿಸಿರುವ ಟ್ರಾವಿಸ್ ಹೆಡ್ ಆಸ್ಟ್ರೇಲಿಯದ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಎಡಗೈ ಬ್ಯಾಟರ್ 201 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 9,111 ರನ್ ಗಳಿಸಿದ್ದಾರೆ. ಇದರಲ್ಲಿ 20 ಶತಕಗಳು ಹಾಗೂ 43 ಅರ್ಧಶತಕಗಳಿವೆ.
ಮಿಚೆಲ್ ಮಾರ್ಷ್ (53 ರನ್) ಅವರೊಂದಿಗೆ 130 ರನ್ ಆರಂಭಿಕ ಜೊತೆಯಾಟ ನಡೆಸಿದ ಹೆಡ್, ಆ ಬಳಿಕ ಕೂಪರ್ ಕೊನೊಲ್ಲಿ (78 ರನ್) ಅವರೊಂದಿಗೆ 60 ರನ್ ಸೇರಿಸಿದರು. ಈ ಮೂಲಕ ಆಸ್ಟ್ರೇಲಿಯ ತಂಡವು 6 ವಿಕೆಟ್ಗಳ ನಷ್ಟಕ್ಕೆ 356 ರನ್ ಗಳಿಸಿತು. ಝಿಂಬಾಬ್ವೆ ಪರ ಬ್ರಾಡ್ ಎವನ್ಸ್ (3–56) ಯಶಸ್ವಿ ಪ್ರದರ್ಶನ ನೀಡಿದರು.
ಗೆಲ್ಲಲು 357 ರನ್ ಗುರಿ ಬೆನ್ನಟ್ಟಿದ ಝಿಂಬಾಬ್ವೆ ತಂಡವು 48.3 ಓವರ್ಗಳಲ್ಲಿ 272 ರನ್ ಗಳಿಸಿ ಆಲೌಟಾಯಿತು. ಸಿಕಂದರ್ ರಝಾ (45 ರನ್) ಸರ್ವಾಧಿಕ ಸ್ಕೋರ್ ಗಳಿಸಿದರು. ಆಸ್ಟ್ರೇಲಿಯದ ಪರವಾಗಿ ಜೋಶ್ ಹೇಝಲ್ವುಡ್, ಕೊನೊಲ್ಲಿ, ಮ್ಯಾಥ್ಯೂ ರೆನ್ಶಾ ಹಾಗೂ ಝಂಪಾ ತಲಾ ಎರಡು ವಿಕೆಟ್ಗಳನ್ನು ಪಡೆದರು.






