ದ್ವಿತೀಯ ಟೆಸ್ಟ್: ಮುಹಮ್ಮದ್ ಶಮಿ ಸ್ಥಾನಕ್ಕೆ ಅವೇಶ್ ಖಾನ್ ಆಯ್ಕೆ

Photo: twitter.com/BCCI
ಹೊಸದಿಲ್ಲಿ: ಗಾಯಗೊಂಡಿರುವ ಹಿರಿಯ ಬೌಲರ್ ಮುಹಮ್ಮದ್ ಶಮಿ ಬದಲಿಗೆ ಅವೇಶ್ ಖಾನ್ರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಆಯ್ಕೆ ಮಾಡಿದೆ.
ದ್ವಿತೀಯ ಟೆಸ್ಟ್ ಪಂದ್ಯವು ಕೇಪ್ಟೌನ್ನ ನ್ಯೂಲ್ಯಾಂಡ್ಸ್ ನಲ್ಲಿ ಜನವರಿ 3ರಿಂದ ಆರಂಭವಾಗಲಿದೆ.
ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 32 ರನ್ ಅಂತರದಿಂದ ಸೋತಿ5ರುವ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.
ಶಮಿ ಅವರು ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದು, ಬಿಸಿಸಿಐನ ವೈದ್ಯಕೀಯ ತಂಡ ಅಗತ್ಯವಿರುವ ಅನುಮತಿಯನ್ನು ನೀಡಿರಲಿಲ್ಲ.
ಕೇಪ್ಟೌನ್ನಲ್ಲಿ 2024ರ ಜನವರಿ 3ರಿಂದ 7ರ ತನಕ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಪುರುಷರ ಆಯ್ಕೆ ಸಮಿತಿಯು ಮುಹಮ್ಮದ್ ಶಮಿ ಬದಲಿಗೆ ಅವೇಶ್ ಖಾನ್ ರನ್ನು ಆಯ್ಕೆ ಮಾಡಿದೆ ಎಂದು ಮಂಡಳಿಯು ಶುಕ್ರವಾರ ಪ್ರಕಟನೆಯಲ್ಲಿ ತಿಳಿಸಿದೆ.
27ರ ಹರೆಯದ ಅವೇಶ್ ಖಾನ್ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ಯಶಸ್ವಿ ಅಭಿಯಾನದಲ್ಲಿ ಭಾಗಿಯಾಗಿದ್ದರು. ಏಕದಿನ ಸರಣಿಯಲ್ಲಿ ಅವೇಶ್ ಒಟ್ಟು 6 ವಿಕೆಟ್ ಗಳನ್ನು ಉರುಳಿಸಿದ್ದರು. ಅವೇಶ್ ಈ ತನಕ 38 ಪ್ರಥಮ ದರ್ಜೆ ಪಂದ್ಯಗಳಲ್ಲಿ 149 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಅವೇಶ್ ಪ್ರಸ್ತುತ ದಕ್ಷಿಣ ಆಫ್ರಿಕಾ ಎ ವಿರುದ್ಧ ಬೆನೋನಿಯಲ್ಲಿ ಭಾರತ ಎ ತಂಡದ ಪರ ಚಥುರ್ದಿನ ಟೂರ್ ಪಂದ್ಯವನ್ನು ಆಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಎ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 263 ರನ್ ಗೆ ನಿಯಂತ್ರಿಸಿದ ಭಾರತ ಎ ತಂಡದ ಪರ ಅವೇಶ್ 23.3 ಓವರ್ಗಳಲ್ಲಿ 5 ಮೇಡನ್ ಸಹಿತ 54 ರನ್ ಗೆ 5 ವಿಕೆಟ್ ಗೊಂಚಲು ಪಡೆದಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧ ಭಾರೀ ಅಂತರದಿಂದ ಸೋತಿರುವ ಮೊದಲ ಪಂದ್ಯದಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ ಸಹ ಬೌಲರ್ಗಳು ಸಾಥ್ ನೀಡದಿರುವುದಕ್ಕೆ ನಾಯಕ ರೋಹಿತ್ ಶರ್ಮಾ ಬೇಸರಗೊಂಡಿದ್ದಾರೆ.
ಭಾರತವು ಬುಮ್ರಾ ಜೊತೆಗೆ ವೇಗಿಗಳಾದ ಮುಹಮ್ಮದ್ ಸಿರಾಜ್, ಪ್ರಸಿದ್ದ ಕೃಷ್ಣ ಹಾಗೂ ಶಾರ್ದೂಲ್ ಠಾಕೂರ್, ಸ್ಟಾರ್ ಸ್ಪಿನ್ನರ್ ಆರ್.ಅಶ್ವಿನ್ರೊಂದಿಗೆ ಮೊದಲ ಟೆಸ್ಟ್ ಗೆ ಪ್ರವೇಶಿಸಿತ್ತು.
ಇದು 400 ರನ್ ಗಳಿಸಬಲ್ಲ ಪಿಚ್ ಆಗಿರಲಿಲ್ಲ. ನಾವು ಸಾಕಷ್ಟು ರನ್ ಬಿಟ್ಟುಕೊಟ್ಟೆವು. ನಾವು ಒಬ್ಬರನ್ನೇ(ಬುಮ್ರಾ)ಅವಲಂಬಿಸಲು ಸಾಧ್ಯವಿಲ್ಲ. ಇತರ ಮೂವರು ವೇಗಿಗಳು ತಮ್ಮ ಪಾತ್ರವನ್ನು ನಿಭಾಯಿಸಬೇಕು. ದಕ್ಷಿಣ ಆಫ್ರಿಕಾ ಬೌಲಿಂಗ್ ನೋಡಿ ನಾವು ಕಲಿಯಬೇಕಾಗಿದೆ. ಬುಮ್ರಾ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಅವರ ಸಾಮರ್ಥ್ಯದ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ ಎಂದು ರೋಹಿತ್ ಪಂದ್ಯದ ನಂತರ ಹೇಳಿದ್ದಾರೆ.
ದ್ವಿತೀಯ ಟೆಸ್ಟ್ ಗೆ ಭಾರತ ತಂಡ
ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್(ವಿಕೆಟ್ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಮುಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ(ಉಪ ನಾಯಕ), ಪ್ರಸಿದ್ಧ ಕೃಷ್ಣ, ಕೆ.ಎಸ್. ಭರತ್(ವಿಕೆಟ್ಕೀಪರ್), ಅಭಿಮನ್ಯು ಈಶ್ವರನ್, ಅವೇಶ್ ಖಾನ್.







