ರಾಜಸ್ಥಾನದ ಗೆಲುವು ಕಸಿದುಕೊಂಡ ಆವೇಶ್ ಖಾನ್ ಫೈನಲ್ ಓವರ್ ಮ್ಯಾಜಿಕ್!

ಆವೇಶ್ ಖಾನ್ | PC : X \ @LucknowIPL
ಹೊಸದಿಲ್ಲಿ: ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ರೋಚಕ ಐಪಿಎಲ್ ಪಂದ್ಯ ಕೊನೆಯ ಓವರ್ನಲ್ಲಿ ನಾಟಕೀಯ ತಿರುವು ಪಡೆದುಕೊಂಡು ರಾಜಸ್ಥಾನ ರಾಯಲ್ಸ್ ತಂಡ ಎರಡು ರನ್ ಅಂತರದ ಸೋಲು ಅನುಭವಿಸಿತು. ಆವೇಶ್ ಖಾನ್ ಅವರ ಅಂತಿಮ ಓವರ್ ಈ ತಿರುವಿಗೆ ಕಾರಣವಾಗಿ ತವರಿನ ಪ್ರೇಕ್ಷಕರ ನಡುವೆ ರಾಯಲ್ಸ್ ಕೈಯಲ್ಲಿದ್ದ ತುತ್ತು ಬಾಯಿಗೆ ಬರದಂತಾಯಿತು.
ಎಲ್ಎಸ್ಜಿ ನೀಡಿದ 181 ರನ್ಗಳ ಗುರಿ ಬೆನ್ನಟ್ಟಿದ ಆರ್ಆರ್ 19 ಓವರ್ ಕೊನೆಗೆ ನಾಲ್ಕು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಅಂತಿಮ ಓವರ್ನಲ್ಲಿ ಗೆಲುವಿಗೆ ಬೇಕಿದ್ದುದು ಕೇವಲ ಒಂಬತ್ತು ರನ್. ಉತ್ತಮ ಫಾರ್ಮ್ನಲ್ಲಿದ್ದ ಶಿಮ್ರಾನ್ ಹೆಟ್ಮೆಯರ್ ಮತ್ತು ಧ್ರುವ ಜುರೇಲ್ ಕ್ರೀಸ್ನಲ್ಲಿದ್ದರು. ಕೊನೆಯ ಓವರ್ ಕೇವಲ ಔಪಚಾರಿಕ ಎಂಬ ಸ್ಥಿತಿ ಇತ್ತು.
ಆದರೆ ಕೊನೆಯ ಓವರ್ಗಾಗಿ ಆವೇಶ್ಖಾನ್ಗೆ ಕೈಗೆ ಚೆಂಡು ಬಂದಾಗ ಅವರ ಯೋಜನೆ ಬೇರೆಯೇ ಆಗಿತ್ತು. ಯಾರ್ಕರ್ನೊಂದಿಗೆ ಓವರ್ ಆರಂಭಿಸಿದರು. ಮೊದಲ ಎಸೆತವನ್ನು ಕೇವಲ ಫ್ಲಿಕ್ ಮಾಡಿ ಒಂದು ರನ್ ಗಳಿಸಲು ಸಾಧ್ಯವಾಯಿತು. ಎರಡನೇ ಎಸೆತ ವೈಡ್ ಆಗಿದ್ದಲ್ಲದೇ ಮಿಸ್ಫೀಲ್ಡಿಂಗ್ನಿಂದಾಗಿ ಎರಡು ರನ್ ಬಂತು.
ಮೂರನೇ ಎಸೆತವನ್ನು ಫ್ಲಿಕ್ ಮಾಡಲು ಹೋದ ವೆಸ್ಟ್ಇಂಡೀಸ್ ಬ್ಯಾಟ್ಸ್ಮನ್, ಸ್ಕ್ವೇರ್ಲೆಗ್ನಲ್ಲಿದ್ದ ಶಾರ್ದೂಲ್ ಠಾಕೂರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದು ಪಂದ್ಯದ ಗತಿಯನ್ನೇ ಬದಲಿಸಿತು. ಹೊಸ ಬ್ಯಾಟ್ಸ್ಮನ್ ಶುಭಂ ದುಬೆ ಮೊದಲ ಎಸೆತವನ್ನೇ ಯಾರ್ಕರ್ ಆಗಿ ಪಡೆದರು. ಯವುದೇ ರನ್ ಸಾಧ್ಯವಾಗದ ಹಿನ್ನೆಲೆಯಲ್ಲಿ ಒತ್ತಡ ಹೆಚ್ಚಿತು.
ಐದನೇ ಎಸೆತವನ್ನೂ ಯಾರ್ಕರ್ ಆಗಿಸುವ ಪ್ರಯತ್ನ ಮಾಡಿದರೂ ಫುಲ್ಟಾಸ್ ಆಯಿತು. ದುಬೆ ಲಾಂಗ್ ಆನ್ನಲ್ಲಿ ಚೆಂಡನ್ನ ಚಿಮ್ಮಿಸಿದರು. ಆದರೆ ಡೇವಿಡ್ ಮಿಲ್ಲರ್ ಕ್ಯಾಚ್ ಕೈಚೆಲ್ಲಿದರು. ಎರಡು ರನ್ ಗಳಿಸಿದ್ದರಿಂದ ಅಂತಿಮ ಎಸೆತದಲ್ಲಿ ನಾಲ್ಕು ರನ್ಗಳ ಅಗತ್ಯವಿತ್ತು. ಆದರೆ ಕೇವಲ ಒಂದು ರನ್ ಗಳಿಸಿದ್ದರಿಂದ ಪಂದ್ಯ ಮುಗಿಯಿತು. ರಾಜಸ್ಥಾನಕ್ಕೆ ಗೆಲುವು ದಕ್ಕಲಿಲ್ಲ. ಪಂದ್ಯದಲ್ಲಿ ಆವೇಶ್ ಖಾನ್ 37 ರನ್ಗೆ ಮೂರು ವಿಕೆಟ್ ಪಡೆದರು. ಆದರೆ ಅವರ ಅಂತಿಮ ಓವರ್ ಮಾತ್ರ ಸ್ಮರಣೀಯ ಎನಿಸಿತು. ರಾಜಸ್ಥಾನದ ಇಬ್ಬರು ಅಪಾಯಕಾರಿ ಬ್ಯಾಟ್ಸ್ಮನ್ಗಳಾದ ಯಶಸ್ವಿ ಜೈಸ್ವಾಲ್ (74) ಮತ್ತು ರಿಯಾನ್ ಪರಾಗ್ (34) ಅವರನ್ನು ಔಟ್ ಮಾಡಿದ್ದಲ್ಲದೇ ಅಂತಿಮ ಓವರ್ನಲ್ಲಿ ಹೆಟ್ಮೆಯೆರ್ ಅವರಿಗೆ ಪೆವಿಲಿಯನ್ ದಾರಿ ತೋರಿಸಿ ಪಂದ್ಯದ ಗತಿಯನ್ನೇ ಬದಲಿಸಿದರು.







