ನ್ಯೂಝಿಲ್ಯಾಂಡ್ ವಿರುದ್ಧ ಸರಣಿಯಿಂದ ಸುಂದರ್ ಔಟ್; ಮೊದಲ ಬಾರಿ ಅವಕಾಶ ಪಡೆದ ಆಯುಷ್ ಬದೋನಿ

ಆಯುಷ್ ಬದೋನಿ | Photo Credit: PTI
ಹೊಸದಿಲ್ಲಿ, ಜ.12: ಆಲ್ರೌಂಡರ್ ವಾಶಿಂಗ್ಟನ್ ಸುಂದರ್ ಗಾಯದ ಸಮಸ್ಯೆಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಇನ್ನುಳಿದ ಪಂದ್ಯಗಳಿಗೆ ಭಾರತ ಕ್ರಿಕೆಟ್ ತಂಡದ ಸಿದ್ಧತೆಗೆ ತೀವ್ರ ಹಿನ್ನಡೆಯಾಗಿದೆ. ಸುಂದರ್ ಬದಲಿಗೆ ಯುವ ಬ್ಯಾಟರ್ ಆಯುಷ್ ಬದೋನಿ ಇದೇ ಮೊದಲ ಬಾರಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ವಡೋದರದ ಕೊಟಂಬಿಯ ಬಿಸಿಎ ಕ್ರೀಡಾಂಗಣದಲ್ಲಿ ರವಿವಾರ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಸುಂದರ್ಗೆ ಗಾಯವಾಗಿದೆ ಎಂದು ಬಿಸಿಸಿಐ ಸೋಮವಾರ ದೃಢಪಡಿಸಿದೆ.
ಆಲ್ರೌಂಡರ್ ಸುಂದರ್ ಬೌಲಿಂಗ್ ವೇಳೆ ಎಡ ಪಕ್ಕೆಲುಬಿನ ನೋವಿಗೆ ಒಳಗಾಗಿದ್ದು ನ್ಯೂಝಿಲ್ಯಾಂಡ್ ಇನಿಂಗ್ಸ್ ವೇಳೆ ಮೈದಾನವನ್ನು ತೊರೆದಿದ್ದರು. ಬ್ಯಾಟಿಂಗ್ ವೇಳೆ 8ನೇ ಕ್ರಮಾಂಕದಲ್ಲಿ ಆಡಿದ ಸುಂದರ್ ಕೇವಲ 7 ರನ್ ಗಳಿಸಿದ್ದರು. ಈ ಪಂದ್ಯವನ್ನು ಭಾರತ ತಂಡವು ನಾಲ್ಕು ವಿಕೆಟ್ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿತ್ತು.
ವೈದ್ಯಕೀಯ ತಂಡವು ತಜ್ಞರ ಅಭಿಪ್ರಾಯವನ್ನು ಪಡೆದ ನಂತರ ಸುಂದರ್ ಹೆಚ್ಚುವರಿ ಸ್ಕ್ಯಾನಿಂಗ್ಗೆ ಒಳಗಾಗಲಿದ್ದಾರೆ. ಸುಂದರ್ ಏಕದಿನ ಸರಣಿಯ ಇನ್ನುಳಿದ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.
26ರ ಹರೆಯದ ಸುಂದರ್ ಕೇವಲ 5 ಓವರ್ಗಳ ಬೌಲಿಂಗ್ ಮಾಡಿದ್ದು ಒಂದೂ ವಿಕೆಟ್ ಪಡೆಯದೆ 25 ರನ್ ಬಿಟ್ಟುಕೊಟ್ಟಿದ್ದಾರೆ.
ಸುಂದರ್ ಅನುಪಸ್ಥಿತಿಯಿಂದಾಗಿ ಆಯುಷ್ ಬದೋನಿಗೆ ಟೀಮ್ ಇಂಡಿಯಾದ ಬಾಗಿಲು ತೆರೆದಿದೆ. ಆಯ್ಕೆ ಸಮಿತಿಯು ಸುಂದರ್ ಬದಲಿಗೆ ಆಯುಷ್ ಬದೋನಿ ಅವರನ್ನು ಆಯ್ಕೆ ಮಾಡಿದೆ.
ಬಲಗೈ ಬ್ಯಾಟರ್ ಬದೋನಿ, ಬಲಗೈ ಆಫ್ ಸ್ಪಿನ್ನರ್ ಆಗಿದ್ದು, ರಾಜ್ಕೋಟ್ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕಿಂತ ಮೊದಲು ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಬದೋನಿ ಇದೀಗ ಟೀಮ್ ಇಂಡಿಯಾವನ್ನು ಸೇರುವ ಮೂಲಕ ತನ್ನ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲು ತಲುಪಿದರು.
ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ತರಬೇತಿಯ ವೇಳೆ ಕಾಣಿಸಿಕೊಂಡ ಗಾಯದಿಂದಾಗಿ ಸರಣಿಯಿಂದಲೇ ಹೊರಗುಳಿದಿದ್ದು, ಇದೀಗ ಸುಂದರ್ ಕೂಡ ಗಾಯಗೊಂಡಿರುವುದು ಭಾರತ ಪಾಳಯದಲ್ಲಿ ಕಳವಳ ಉಂಟು ಮಾಡಿದೆ. ಮೊದಲ ಏಕದಿನ ಪಂದ್ಯದಲ್ಲಿ ಪಂತ್ ಬದಲಿಗೆ ಧ್ರುವ ಜುರೆಲ್ ಆಡುವ 11ರ ಬಳಗವನ್ನು ಸೇರಿದ್ದರು.
ಎರಡನೇ ಹಾಗೂ ಮೂರನೇ ಏಕದಿನ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡ:
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ (ವಿಕೆಟ್ಕೀಪರ್), ಶ್ರೇಯಸ್ ಅಯ್ಯರ್ (ಉಪ ನಾಯಕ), ರವೀಂದ್ರ ಜಡೇಜ, ಮುಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ ಕೃಷ್ಣ, ಕುಲದೀಪ ಯಾದವ್, ನಿತೀಶ್ ಕುಮಾರ ರೆಡ್ಡಿ, ಅರ್ಷದೀಪ ಸಿಂಗ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್ (ವಿಕೆಟ್ಕೀಪರ್), ಆಯುಷ್ ಬದೋನಿ.







