ಆಯುಶ್ ಮ್ಹಾತ್ರೆ 3 ವಾರ IPLನಿಂದ ಹೊರಗೆ?

ಆಯುಶ್ ಮ್ಹಾತ್ರೆ | Photo Credit : PTI
ಚೆನ್ನೈ, ಎ. 19: ಗಾಯಗೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಆಟಗಾರ ಆಯುಶ್ ಮ್ಹಾತ್ರೆ ಮೂರು ವಾರಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಹೊರಬಿದ್ದಿದ್ದಾರೆ. ಶನಿವಾರ ನಡೆದ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಅವರ ಎಡಗಾಲಿನ ಮೀನಖಂಡಕ್ಕೆ ಗಾಯವಾಗಿದೆ ಎಂದು ವರದಿಗಳು ತಿಳಿಸಿವೆ. ಆ ಪಂದ್ಯವನ್ನು ಸನ್ರೈಸರ್ಸ್ ಹೈದರಾಬಾದ್ 10 ರನ್ ಗಳಿಂದ ಗೆದ್ದಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಆಡುವುದಕ್ಕಾಗಿ ಸೋಮವಾರ ಮುಂಬೈಗೆ ತೆರಳಲಿದೆ. ಆಗ 18 ವರ್ಷದ ಮ್ಹಾತ್ರೆ ಮುಂಬೈಯಲ್ಲಿ ತಪಾಸಣೆಗೆ ಒಳಗಾಗಲಿದ್ದಾರೆ.
ಶನಿವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಆಡಲು ಇಳಿದ ಮ್ಹಾತ್ರೆ 12 ಎಸೆತಗಳಲ್ಲಿ 30 ರನ್ ಗಳನ್ನು ಸಿಡಿಸಿದ್ದರು. ಆದರೆ ಬಳಿಕ ಅವಳಿ ರನ್ ಗಳಿಗಾಗಿ ಓಡುವಾಗ ಗಾಯಗೊಂಡರು.
ಗಾಯದ ನೋವು ಅವರ ಮುಖದಲ್ಲಿ ಗೋಚರಿಸುತ್ತಿತ್ತು. ಅವರು ತಮ್ಮ ಮೀನಖಂಡವನ್ನು ಅವುಚಿ ಹಿಡಿದುಕೊಂಡರು. ಆಗ ತಂಡದ ಫಿಸಿಯೊ ಅವರಿಗೆ ತಕ್ಷಣ ಚಿಕಿತ್ಸೆ ನೀಡಿದರು.
ಮ್ಹಾತ್ರೆ ಮೂರು ವಾರಗಳ ಕಾಲ ಆಟದಿಂದ ಹೊರಗಿರುತ್ತಾರೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಅವರ ಗಾಯವು ಆರಂಭದಲ್ಲಿ ಕಂಡುಬಂದಷ್ಟು ತೀವ್ರವಾಗಿಲ್ಲ ಹಾಗೂ ಗಾಯದ ಪ್ರಮಾಣವು ಸೋಮವಾರದ ತಪಾಸಣೆಯ ಬಳಿಕ ತಿಳಿದುಬರುತ್ತದೆ ಎಂದು ಅದು ಹೇಳಿದೆ.






