ಟಿ20 ಕ್ರಿಕೆಟ್ ನಲ್ಲಿ 10ನೇ ಬಾರಿ ಸೊನ್ನೆ ಸುತ್ತಿದ ಬಾಬರ್ ಆಝಂ

ಬಾಬರ್ ಆಝಂ | Photo Credit : PTI
ರಾವಲ್ಪಿಂಡಿ, ನ.28: ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಗುರುವಾರ ರಾತ್ರಿ ಶ್ರೀಲಂಕಾ ತಂಡದ ವಿರುದ್ಧ ಟಿ20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಮತ್ತೊಮ್ಮೆ ಶೂನ್ಯಕ್ಕೆ ಔಟಾದರು. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ ಹೆಚ್ಚು ಬಾರಿ ಸೊನ್ನೆ ಸುತ್ತಿದ್ದ ತಮ್ಮದೇ ದೇಶದ ಉಮರ್ ಅಕ್ಮಲ್ ಹಾಗೂ ಸಯೀಮ್ ಅಯ್ಯೂಬ್ ಅವರ ಅನಪೇಕ್ಷಿತ ದಾಖಲೆಯನ್ನು ಸರಿಗಟ್ಟಿದ್ದಾರೆ.
31ರ ವಯಸ್ಸಿನ ಬಾಬರ್ ಈಗ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ತಂಡದ ವಿರುದ್ಧ ಆಡಿರುವ ಆರನೇ ಪಂದ್ಯದಲ್ಲಿ ಎರಡು ಎಸೆತಗಳನ್ನು ಎದುರಿಸಿದ್ದರೂ ರನ್ ಖಾತೆ ತೆರೆಯದೆ ಔಟಾದರು.
ಗೆಲ್ಲಲು 185 ರನ ಗುರಿ ಪಡೆದಿದ್ದ ಪಾಕಿಸ್ತಾನ ತಂಡವು ಬಾಬರ್ ರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿತ್ತು. ಆದರೆ ಅವರು ದುಷ್ಮಂತ ಚಾಮೀರ ಬೌಲಿಂಗ್ ನಲ್ಲಿ ನಾಲ್ಕನೇ ಓವರ್ ನ ಕೊನೆಯ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.
ಬಾಬರ್ ಟಿ20 ಕ್ರಿಕೆಟ್ ನಲ್ಲಿ 10ನೇ ಬಾರಿ ಶೂನ್ಯ ಸಂಪಾದಿಸಿದರು. ಈ ಮೂಲಕ ಪಾಕಿಸ್ತಾನದ ಉಮರ್ ಅಕ್ಮಲ್ ಹಾಗೂ ಸಯೀಮ್ ಅಯ್ಯೂಬ್ ಅವರೊಂದಿಗೆ ಸ್ಥಾನ ಹಂಚಿಕೊಂಡರು.
ಜಾಗತಿಕ ಮಟ್ಟದಲ್ಲಿ ಶ್ರೀಲಂಕಾದ ಮಾಜಿ ನಾಯಕ ದಸುನ್ ಶನಕ ಟಿ20 ಕ್ರಿಕೆಟ್ ನಲ್ಲಿ ಅತ್ಯಂತ ಹೆಚ್ಚು 15 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಆರು ಆಟಗಾರರು 13 ಬಾರಿ ಶೂನ್ಯಕ್ಕೆ ಔಟಾಗಿದ್ದು, ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ತನ್ನ ವೃತ್ತಿಜೀವನದಲ್ಲಿ 12 ಬಾರಿ ಶೂನ್ಯ ಸಂಪಾದಿಸಿದ್ದರು.
►ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಪಾಕಿಸ್ತಾನದ ಆಟಗಾರರು
ಸಯೀಮ್ ಅಯ್ಯೂಬ್-10
ಉಮರ್ ಅಕ್ಮಲ್-10
ಬಾಬರ್ ಆಝಂ-10
ಶಾಹೀದ್ ಅಫ್ರಿದಿ-8
ಕಮ್ರಾನ್ ಅಕ್ಮಲ್-7
ಮುಹಮ್ಮದ್ ನವಾಝ್-7
ಮುಹಮ್ಮದ್ ಹಫೀಝ್-7







