ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ದಾಖಲೆ ಮುರಿದ ಬಾಬರ್ ಆಝಮ್

ಬಾಬರ್ ಆಝಮ್ | Photo Credit : X
ಕರಾಚಿ,ಎ.20: ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ 2026ರ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಪಂದ್ಯದಲ್ಲಿ ಪೇಶಾವರ ಝಲ್ಮಿ ತಂಡದ ಪರ ಶತಕವನ್ನು ಸಿಡಿಸಿದ ಬಾಬರ್ ಆಝಮ್ ಸಂಪೂರ್ಣ ಭಾವುಕರಾದರು.
ದೀರ್ಘ ಸಮಯದ ನಂತರ ಕೇವಲ 52 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ಗಳ ಸಹಿತ ಔಟಾಗದೆ 100 ರನ್ ಗಳಿಸಿದ ಬಾಬರ್ ತನ್ನ ಹೆಲ್ಮೆಟ್ ತೆಗೆದು ಸಂಭ್ರಮಿಸಿದರು. ಬಾಬರ್ 783 ದಿನಗಳ ನಂತರ ಮೂರಂಕೆಯನ್ನು ದಾಟಿದರು.
ಟಿ-20 ಕ್ರಿಕೆಟ್ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಬಾಬರ್ ಕೇವಲ 338 ಇನಿಂಗ್ಸ್ಗಳಲ್ಲಿ 12,000 ರನ್ ಪೂರೈಸಿದರು. ವೇಗವಾಗಿ ಈ ಮೈಲಿಗಲ್ಲು ತಲುಪಿದ ಬಾಬರ್ ಅವರು ಕ್ರಿಸ್ ಗೇಲ್(344 ಇನಿಂಗ್ಸ್)ಹಾಗೂ ವಿರಾಟ್ ಕೊಹ್ಲಿ(360 ಇನಿಂಗ್ಸ್)ದಾಖಲೆಗಳನ್ನು ಸರಿಗಟ್ಟಿದರು.
ಬಾಬರ್ ಅವರ ಶತಕದ ಬಲದಿಂದ ಪೇಶಾವರ ತಂಡವು ನ್ಯಾಶನಲ್ ಸ್ಟೇಡಿಯಂನಲ್ಲಿ ನಿಗದಿತ 20 ಓವರ್ಗಳಲ್ಲಿ ಮೂರು ವಿಕೆಟ್ಗಳ ನಷ್ಟಕ್ಕೆ 255 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕ್ವೆಟ್ಟಾ ತಂಡವು 137 ರನ್ ಗಳಿಸಿ ಆಲೌಟಾಯಿತು. ಪೇಶಾವರ ತಂಡವು 118 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.
ಇನಿಂಗ್ಸ್ ಮೇಲೆ ಹಿಡಿತ ಸಾಧಿಸಿದ ಬಾಬರ್ ಅವರು 52 ಎಸೆತಗಳಲ್ಲಿ ಕೇವಲ ಒಂದು ಡಾಟ್ ಬಾಲ್ ಎದುರಿಸಿದ್ದರು.




