ವೇಗದ 6,000 ಏಕದಿನ ರನ್: ಹಾಶಿಮ್ ಅಮ್ಲ ದಾಖಲೆ ಸರಿಗಟ್ಟಿದ ಬಾಬರ್ ಅಝಮ್
►ಹಿಂದೆ ಬಿದ್ದ ಕೊಹ್ಲಿ

Photo Credit | X/@TheRealPCB
ಕರಾಚಿ: ಪಾಕಿಸ್ತಾನದ ಬ್ಯಾಟಿಂಗ್ ತಾರೆ ಬಾಬರ್ ಅಝಮ್ ಶುಕ್ರವಾರ ಅತ್ಯಂತ ಕ್ಷಿಪ್ರವಾಗಿ 6,000 ಏಕದಿನ ರನ್ ಗಳಿಕೆಯ ದಾಖಲೆಯನ್ನು ಸರಿಗಟ್ಟಿದ್ದಾರೆ.
ಕರಾಚಿಯ ನ್ಯಾಶನಲ್ ಸ್ಟೇಡಿಯಮ್ನಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ತ್ರಿಕೋನ ಸರಣಿಯ ಫೈನಲ್ನಲ್ಲಿ ಅವರು ಈ ಸಾಧನೆಗೈದಿದ್ದಾರೆ.
ಇದಕ್ಕೂ ಮೊದಲು 6,000 ಏಕದಿನ ರನ್ಗಳನ್ನು ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲ 123 ಇನಿಂಗ್ಸ್ಗಳಲ್ಲಿ ಮಾಡಿದ್ದರು. ಅದನ್ನು ಸರಿಗಟ್ಟಲು ಬಾಬರ್ ಶುಕ್ರವಾರ 10 ರನ್ಗಳನ್ನು ಮಾಡಬೇಕಾಗಿತ್ತು. ಬಾಬರ್ ತನ್ನ 6,000 ಏಕದಿನ ರನ್ಗಳನ್ನು ಪಾಕಿಸ್ತಾನಿ ಇನಿಂಗ್ಸ್ನ ಏಳನೇ ಓವರ್ನಲ್ಲಿ ಪೂರೈಸಿದರು. ಜಾಕೋಬ್ ಡಫಿಯ ಎಸೆತವೊಂದನ್ನು ಕವರ್ಸ್ನತ್ತ ತಳ್ಳಿ ನಾಲ್ಕು ರನ್ಗಳನ್ನು ಗಳಿಸುವ ಮೂಲಕ ಅವರು 6,000 ರನ್ ತಲುಪಿದರು. ಇದು ಬಾಬರ್ ಅವರದ್ದೂ 123ನೇ ಏಕದಿನ ಇನಿಂಗ್ಸ್ ಆಗಿದೆ.
ಗಾಯಾಳು ಸಯೀಮ್ ಅಯೂಬ್ರ ಅನುಪಸ್ಥಿತಿಯಲ್ಲಿ, ಪಂದ್ಯಾವಳಿಯಲ್ಲಿ ಆರಂಭಿಕನಾಗಿ ಬ್ಯಾಟ್ ಮಾಡುತ್ತಿರುವ ಬಾಬರ್, ನತಾನ್ ಸ್ಮಿತ್ಗೆ ಕಾಟ್ ಆ್ಯಂಡ್ ಬೌಲ್ಡ್ ಆಗುವ ಮುನ್ನ 29 ರನ್ಗಳನ್ನು ಗಳಿಸಿದರು.
ಈಗ ಬಾಬರ್ 6,000 ರನ್ಗಳನ್ನು ಅತ್ಯಂತ ವೇಗವಾಗಿ ಗಳಿಸಿದ ಮೊದಲ ಏಶ್ಯನ್ ಕ್ರಿಕೆಟಿಗನೂ ಆಗಿದ್ದಾರೆ. ಈವರೆಗೆ ಈ ದಾಖಲೆಯು ಭಾರತದ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಅವರು 6,000 ರನ್ಗಳನ್ನು 136 ಇನಿಂಗ್ಸ್ಗಳಲ್ಲಿ ಗಳಿಸಿದ್ದಾರೆ.





