ಬ್ಯಾಡ್ಮಿಂಟನ್ ಏಶ್ಯಾ ಮಿಕ್ಸಡ್ ಟೀಮ್ ಚಾಂಪಿಯನ್ಶಿಪ್ | ದಕ್ಷಿಣ ಕೊರಿಯ ವಿರುದ್ಧ ಭಾರತಕ್ಕೆ 2-3 ಅಂತರದ ಸೋಲು

Photo - Badminton Asia
ಕಿಂಗ್ಡಾವೊ (ಚೀನಾ) : ಚೀನಾದ ಕಿಂಗ್ಡಾವೊದಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಶ್ಯಾ ಮಿಕ್ಸಡ್ ಟೀಮ್ ಚಾಂಪಿಯನ್ ಶಿಪ್ಸ್ 2025ರಲ್ಲಿ ಗುರುವಾರ ಭಾರತವು ‘ಡಿ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 2-3 ಅಂತರದ ಸೋಲನುಭವಿಸಿದೆ.
ಆದರೆ, ಭಾರತವು ಈಗಾಗಲೇ ಕ್ವಾರ್ಟರ್ಫೈನಲ್ಗೆ ಪ್ರವೇಶ ಪಡೆದಿದೆ. ‘ಡಿ’ ಗುಂಪಿನ ವಿಜೇತರನ್ನು ನಿರ್ಧರಿಸಲು ಭಾರತ ಮತ್ತು ದಕ್ಷಿಣ ಕೊರಿಯಗಳು ಮುಖಾಮುಖಿಯಾದವು.
ಭಾರತದ ಆರಂಭ ಕೆಟ್ಟದಾಗಿತ್ತು. ಮಿಶ್ರ ಡಬಲ್ಸ್ನಲ್ಲಿ ಧ್ರುವ ಕಪಿಲ್ ಮತ್ತು ತನಿಶಾ ಕ್ರಾಸ್ಟೊ ದಕ್ಷಿಣ ಕೊರಿಯದ ಜೋಡಿಯ ವಿರುದ್ಧ ಪರಾಭವ ಹೊಂದಿದರು. ಬಳಿಕ ಮಹಿಳೆಯರ ಸಿಂಗಲ್ಸ್ನಲ್ಲಿಯೂ ಭಾರತದ ಮಾಳವಿಕಾ ಬಾನ್ಸೋಡ್ ಸೋಲನುಭವಿಸಿದರು.
ಭಾರತವನ್ನು ಮತ್ತೆ ಸ್ಪರ್ಧೆಗೆ ತಂದು ನಿಲ್ಲಿಸಿದವರು ರಾಷ್ಟ್ರೀಯ ಗೇಮ್ಸ್ನಲ್ಲಿ ಅವಳಿ ಚಿನ್ನದ ಪದಕಗಳನ್ನು ಗೆದ್ದಿರುವ ಸತೀಶ್ಕುಮಾರ್ ಕರುಣಾಕರನ್. ಅವರು ದಕ್ಷಿಣ ಕೊರಿಯದ ತನ್ನ ಎದುರಾಳಿ ಚೊ ಜಿಯೋನ್ಯೆಪೊರನ್ನು 17-21, 21-18, 21-19 ಗೇಮ್ಗಳಿಂದ ಮಣಿಸಿದರು.
ಬಳಿಕ, ವಿಶ್ವದ ಒಂಭತ್ತನೇ ರ್ಯಾಂಕಿಂಗ್ನ ಮಹಿಳಾ ಜೋಡಿ ಗಾಯತ್ರಿ ಗೋಪಿಚಂದ್ ಮತ್ತು ಟ್ರೀಸಾ ಜೋಲಿ ದಕ್ಷಿಣ ಕೊರಿಯದ ಕಿಮ್ ಮಿನ್ ಜಿ ಮತ್ತು ಕಿಮ್ ಯು ಜುಂಗ್ ಜೋಡಿಯನ್ನು 19-21, 21-16, 21-11 ಗೇಮ್ಗಳಿಂದ ಸೋಲಿಸಿದರು. ಆಗ ಸ್ಪರ್ಧೆಯು 2-2ರಲ್ಲಿ ಸಮಬಲಗೊಂಡಿತು.
ಆದರೆ, ಅಂತಿಮವಾಗಿ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ, ಭಾರತವು ಸೋಲನುಭವಿಸಿತು. ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಎಮ್.ಆರ್. ಅರ್ಜುನ್ ಜೋಡಿಯನ್ನು ಕೊರಿಯದ ಜಿನ್ ಯೊಂಗ್ ಮತ್ತು ನ ಸುಂಗ್ ಸಿಯುಂಗ್ ಜೋಡಿ ಸೋಲಿಸಿತು.







