ಬಾಳೆ ಹಣ್ಣುಗಳಿಗೆ 35 ಲಕ್ಷ ರೂ. ಖರ್ಚು!

ಸಾಂದರ್ಭಿಕ ಚಿತ್ರ
ಡೆಹ್ರಾಡೂನ್, ಸೆ.10: ಉತ್ತರಾಖಂಡ ಕ್ರಿಕೆಟ್ ಸಂಸ್ಥೆ(ಸಿಎಯು)ಸರಕಾರಿ ನಿಧಿಯಲ್ಲಿ 12 ಕೋ.ರೂ. ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಉತ್ತರಾಖಂಡ ಹೈಕೋರ್ಟ್ ಮಂಗಳವಾರ ಬಿಸಿಸಿಐಗೆ ನೋಟಿಸ್ ಜಾರಿ ಮಾಡಿದೆ.
ಬಾಹ್ಯ ಚಾರ್ಟರ್ಡ್ ಅಕೌಂಟೆಂಟ್ ನಡೆಸಿದ ಸಿಎಯುನ ಆಡಿಟ್ ವರದಿಯನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಆಟಗಾರರಿಗೆ ಬಾಳೆ ಹಣ್ಣುಗಳನ್ನು ಪೂರೈಸಲು 35 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ವರದಿಯಲ್ಲಿ ಪಟ್ಟಿ ಮಾಡಲಾಗಿದೆ.
ನ್ಯಾಯಮೂರ್ತಿ ಮನೋಜ್ ಕುಮಾರ್ ತಿವಾರಿ ಅವರಿದ್ದ ಏಕಸದಸ್ಯ ಪೀಠವು 2024-25ರ ಹಣಕಾಸು ವರ್ಷದಲ್ಲಿ ಕ್ರಿಕೆಟ್ ಸಂಸ್ಥೆಯ ಬ್ಯಾಂಕ್ ಖಾತೆಗಳ ಆಡಿಟ್ ವರದಿಯ ತನಿಖೆಗಾಗಿ ಡೆಹ್ರಾಡೂನ್ ನಿವಾಸಿ ಸಂಜಯ್ ರಾವತ್ ಹಾಗೂ ಇತರರು ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಆಡಿಟ್ ವರದಿಯ ಪ್ರಕಾರ ಈವೆಂಟ್ ಮ್ಯಾನೇಜ್ಮೆಂಟ್ಗೆ 6.4 ಕೋ.ರೂ.ಪಾವತಿಸಲಾಗಿದ್ದು, ಪಂದ್ಯಾವಳಿಗಳು ಹಾಗೂ ಟ್ರಯಲ್ ವೆಚ್ಚಕ್ಕಾಗಿ ಒಟ್ಟು 26.3 ಕೋ.ರೂ. ಖರ್ಚು ಮಾಡಲಾಗಿದೆ.
ಆಹಾರ ವೆಚ್ಚದ ಹೆಸರಿನಲ್ಲಿ ಕ್ರಿಕೆಟ್ ಸಂಸ್ಥೆಯು ಕೋಟ್ಯಂತರ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದೆ. ರಾಜ್ಯ ಆಟಗಾರರಿಗೆ ಭರವಸೆ ನೀಡಿದ ಸೌಲಭ್ಯಗಳನ್ನು ಎಂದಿಗೂ ಒದಗಿಸಲಾಗಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿಪಡಿಸಿದೆ.







