ಪಾಕಿಸ್ತಾನದ ವಿರುದ್ಧ ಕ್ಯಾಚ್ ಕೈಚೆಲ್ಲಿದ್ದಕ್ಕೆ ಬೆಲೆ ತೆತ್ತ ಬಾಂಗ್ಲಾದೇಶ

PC: X
ದುಬೈ, ಸೆ.26: ಬಾಂಗ್ಲಾದೇಶ ತಂಡವು ರವಿವಾರ ನಡೆಯಲಿರುವ ಏಶ್ಯ ಕಪ್ ಫೈನಲ್ನಲ್ಲಿ ಭಾರತ ತಂಡವನ್ನು ಎದುರಿಸುವ ಸನಿಹಕ್ಕೆ ತಲುಪಿತ್ತು. ಆದರೆ, ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ. ಇದೇ ಮೊದಲ ಬಾರಿ ಸಾಂಪ್ರದಾಯಿಕ ಎದುರಾಳಿಗಳು ಏಶ್ಯ ಕಪ್ ಫೈನಲ್ನಲ್ಲಿ ಸೆಣಸಾಡಲಿವೆ.
ನೂರುಲ್ ಹಸನ್ ಹಾಗೂ ಮೆಹಿದಿ ಹಸನ್ 12ನೇ ಓವರ್ನಲ್ಲಿ ಶಾಹೀನ್ ಅಫ್ರಿದಿ ಕ್ಯಾಚ್ ಕೈಚೆಲ್ಲಿದ್ದಾಗ ಪಾಕಿಸ್ತಾನ 5 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿತ್ತು. ಜೀವದಾನದ ಲಾಭ ಪಡೆದ ಅಫ್ರಿದಿ 2 ಸಿಕ್ಸರ್ಗಳ ಸಹಿತ 13 ಎಸೆತಗಳಲ್ಲಿ 19 ರನ್ ಗಳಿಸಿ ಪಾಕಿಸ್ತಾನದ ಇನಿಂಗ್ಸ್ಗೆ ಜೀವ ತುಂಬಿದರು. ಅಫ್ರಿದಿ ಔಟಾದ ನಂತರ ಪರ್ವೇಝ್ ಹುಸೇನ್ ಅವರು ಮುಹಮ್ಮದ್ ನವಾಝ್ ರನ್ ಖಾತೆ ತೆರೆಯುವ ಮೊದಲೇ ಜೀವದಾನ ನೀಡಿದ್ದರು. ನವಾಝ್ 15 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿಯ ಸಹಿತ 25 ರನ್ ಕಲೆ ಹಾಕಿದರು.
ಕ್ಯಾಚ್ಗಳನ್ನು ಬಿಟ್ಟಿದ್ದು, ಬ್ಯಾಟರ್ಗಳ ಕೆಟ್ಟ ನಿರ್ಧಾರದಿಂದಾಗಿ ಬಾಂಗ್ಲಾದೇಶಕ್ಕೆ 136 ರನ್ ಗುರಿ ಬೆನ್ನಟ್ಟಲು ಸಾಧ್ಯವಾಗಲಿಲ್ಲ ಎಂದು ತಂಡದ 11 ರನ್ ಸೋಲಿಗೆ ಕೋಚ್ ಫಿಲ್ ಸಿಮನ್ಸ್ ಕಾರಣ ನೀಡಿದರು.
’’ನಮ್ಮ ಆಟಗಾರರು ಶಾಹೀನ್ ಹಾಗೂ ನವಾಝ್ ಕ್ಯಾಚ್ಗಳನ್ನು ಕೈಬಿಟ್ಟಾಗಲೇ ಪಂದ್ಯವು ಬದಲಾಯಿತು. ಅದಕ್ಕೂ ಮೊದಲು ನಾವು ಪಂದ್ಯದ ಮೇಲೆ ಹಿಡಿತ ಹೊಂದಿದ್ದೆವು’’ಎಂದು ಸಿಮನ್ಸ್ ಹೇಳಿದ್ದಾರೆ.
ಏಶ್ಯ ಕಪ್ ಫೈನಲ್ನಲ್ಲಿ ಫೀಲ್ಡಿಂಗ್ ವಿಭಾಗದತ್ತ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ಭಾರತ ತಂಡ ಕೂಡ ಕಳಪೆ ಫೀಲ್ಡಿಂಗ್ನಿಂದಾಗಿ ಗಮನ ಸೆಳೆದಿದೆ. ಸೂರ್ಯಕುಮಾರ್ ನೇತೃತ್ವದ ತಂಡವು 5 ಪಂದ್ಯಗಳಲ್ಲಿ 12 ಕ್ಯಾಚ್ಗಳನ್ನು ಬಿಟ್ಟಿದೆ. ಹಾಂಕಾಂಗ್ ತಂಡ ಮಾತ್ರ ಹೆಚ್ಚು ಕ್ಯಾಚ್ಗಳನ್ನು ಕೈಚೆಲ್ಲಿದೆ.
ಏಶ್ಯ ಕಪ್ ವೇಳೆ ಭಾರತ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಫೀಲ್ಡಿಂಗ್ನಲ್ಲಿ ಪ್ರದರ್ಶನ ನೀಡಿದ್ದಾರೆ.







