Bangladesh ಕ್ರಿಕೆಟ್ ಬಿಕ್ಕಟ್ಟು: ನಿರ್ದೇಶಕ ಎಂ. ನಝ್ಮುಲ್ ಇಸ್ಲಾಂರನ್ನು ವಜಾಗೊಳಿಸಿದ ಬಿಸಿಬಿ

Photo Credit ; timesofindia.indiatimes.com
ಢಾಕಾ: ಬಾಂಗ್ಲಾದೇಶ ಕ್ರಿಕೆಟಿಗರ ಒತ್ತಾಯದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿರ್ದೇಶಕ ಎಂ. ನಝ್ಮುಲ್ ಇಸ್ಲಾಂರನ್ನು ವಜಾಗೊಳಿಸಲಾಗಿದ್ದು, ಹಣಕಾಸು ಸಮಿತಿಯ ಮುಖ್ಯಸ್ಥ ಸ್ಥಾನ ಸೇರಿದಂತೆ ಅವರು ಹೊಂದಿದ್ದ ಎಲ್ಲ ಜವಾಬ್ದಾರಿಗಳಿಂದಲೂ ಬಿಡುಗಡೆಗೊಳಿಸಲಾಗಿದೆ.
“ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಹಿತಾಸಕ್ತಿಯ ದೃಷ್ಟಿಯಿಂದ ಇತ್ತೀಚಿನ ಬೆಳವಣಿಗೆಗಳನ್ನು ಪರಾಮರ್ಶಿಸಲಾಗಿದ್ದು, ಹಣಕಾಸು ಸಮಿತಿಯ ಅಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲ ಜವಾಬ್ದಾರಿಗಳಿಂದಲೂ ನಝ್ಮುಲ್ ಇಸ್ಲಾಂರನ್ನು ಬಿಡುಗಡೆಗೊಳಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ನಿರ್ಧರಿಸಿದ್ದಾರೆ” ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಲಾಗಿದೆ.
“ಕ್ರಿಕೆಟಿಗರ ಹಿತಾಸಕ್ತಿಯು ನಮ್ಮ ಅತ್ಯುನ್ನತ ಆದ್ಯತೆಯಾಗಿದೆ ಎಂಬುದನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪುನರುಚ್ಚರಿಸುತ್ತದೆ. ತನ್ನ ವ್ಯಾಪ್ತಿಯಲ್ಲಿರುವ ಎಲ್ಲ ಆಟಗಾರರ ಗೌರವ ಮತ್ತು ಘನತೆಯನ್ನು ಎತ್ತಿ ಹಿಡಿಯಲು ಕ್ರಿಕೆಟ್ ಮಂಡಳಿ ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.
ಮೀರ್ ಪುರ್ ನ ಶೇರ್-ಇ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ಮಧ್ಯಾಹ್ನ 1 ಗಂಟೆಗೆ ನಿಗದಿಯಾಗಿದ್ದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಪಾಲ್ಗೊಳ್ಳಲು ತಂಡಗಳು ಹಾಜರಾಗದ ಹಿನ್ನೆಲೆಯಲ್ಲಿ ಪಂದ್ಯ ರದ್ದುಗೊಂಡಿದ್ದು, ಈ ಬೆಳವಣಿಗೆಯ ನಂತರವೇ ಈ ಕ್ರಮ ಕೈಗೊಳ್ಳಲಾಗಿದೆ.
ದೇಶದ ಕ್ರಿಕೆಟಿಗರ ವಿರುದ್ಧ ಸಾರ್ವಜನಿಕವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿರ್ದೇಶಕ ಎಂ. ನಝ್ಮುಲ್ ಇಸ್ಲಾಂ ಅವರ ರಾಜೀನಾಮೆಗೆ ಬಾಂಗ್ಲಾದೇಶ ಕ್ರಿಕೆಟಿಗರು ಆಗ್ರಹಿಸಿದ್ದರು. ನಝ್ಮುಲ್ ಇಸ್ಲಾಂ ರಾಜೀನಾಮೆ ನೀಡದಿದ್ದರೆ ಎಲ್ಲ ಮಾದರಿಯ ಕ್ರಿಕೆಟ್ ಅನ್ನು ಬಹಿಷ್ಕರಿಸಲಾಗುವುದು ಎಂದು ಅವರು ಬೆದರಿಕೆ ಒಡ್ಡಿದ್ದರು.







