ಬಾಂಗ್ಲಾದೇಶ ತಂಡದ ಸುರಕ್ಷತೆ, ಭದ್ರತೆಯ ಬಗ್ಗೆ ಕಳವಳಗಳಿಗೆ ಐಸಿಸಿ ಪ್ರತಿಕ್ರಿಯಿಸಿದೆ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ

Photo Credit : @ArmaanMali7901 , @ICC
ಢಾಕಾ: ಭಾರತದಲ್ಲಿ ನಡೆಯಲಿರುರುವ ಪುರುಷರ ಟಿ-20 ವಿಶ್ವಕಪ್ ಟೂರ್ನಿಯ ಸಮಯದಲ್ಲಿ ಬಾಂಗ್ಲಾದೇಶದ ರಾಷ್ಟ್ರೀಯ ತಂಡದ ಸುರಕ್ಷತೆ ಹಾಗೂ ಭದ್ರತೆಯ ಬಗ್ಗೆ ಇರುವ ಕಳವಳಗಳಿಗೆ ಸಂಬಂಧಿಸಿದಂತೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯಿಂದ ಔಪಚಾರಿಕ ಪ್ರತಿಕ್ರಿಯೆ ಬಂದಿದೆ. ನಮಗೆ ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ಮಂಗಳವಾರ ತಿಳಿಸಿದೆ.
ಜಾಗತಿಕ ಕ್ರಿಕೆಟ್ ಆಡಳಿತ ಮಂಡಳಿಯು ಪಂದ್ಯಾವಳಿಯಲ್ಲಿ ಬಾಂಗ್ಲಾದೇಶದ ‘ಪೂರ್ಣ ಹಾಗೂ ಅಡೆತಡೆಯಿಲ್ಲದ ಭಾಗವಹಿಸುವಿಕೆ’ಯನ್ನು ಖಚಿತಪಡಿಸಿಕೊಳ್ಳಲು ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದು ಐಸಿಸಿ ಜೊತೆಗಿನ ಸಂವಹನದ ನಂತರ ಬಿಡುಗಡೆ ಮಾಡಿದ ವಿವರವಾದ ಹೇಳಿಕೆಯೊಂದರಲ್ಲಿ ಬಿಸಿಬಿ ತಿಳಿಸಿದೆ.
ನಾವು ಎತ್ತಿದ ಕಳವಳಗಳನ್ನು ಪರಿಹರಿಸಲು ನಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ಐಸಿಸಿ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದೆ. ಪಂದ್ಯಾವಳಿಯ ಭದ್ರತಾ ಯೋಜನೆಯ ಭಾಗವಾಗಿ ಬಾಂಗ್ಲಾದೇಶದ ಕಳವಳವನ್ನು ಸರಿಯಾಗಿ ಪರಿಗಣಿಸಲಾಗುತ್ತದೆ ಎಂದು ಐಸಿಸಿ ಭರವಸೆ ನೀಡಿದೆ ಎಂದು ಬಿಸಿಬಿ ತಿಳಿಸಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡದ ಸುರಕ್ಷತೆ, ಭದ್ರತೆ ಹಾಗೂ ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಂಪೂರ್ಣ ಬದ್ದವಾಗಿದೆ. ಆದರೆ, ಬಿಸಿಬಿಗೆ ಐಸಿಸಿ ಅಂತಿಮ ಎಚ್ಚರಿಕೆಯನ್ನು ನೀಡಿದೆ ಎಂಬ ವರದಿಗಳು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಎಂದು ಬಿಸಿಬಿ ಒತ್ತಿ ಹೇಳಿದೆ.







