'ಮಾಡು ಇಲ್ಲವೇ ಮಡಿ' ಪಂದ್ಯದಲ್ಲಿ ಗೆದ್ದ ಬಾಂಗ್ಲಾದೇಶ; ಸೂಪರ್-4 ಆಸೆ ಜೀವಂತ

PC: x.com/FilmtoFinale
ಅಬುಧಾಬಿ: ಮಂಗಳವಾರ ನಡೆದ ಏಷ್ಯಾಕಪ್ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಎಂಟು ರನ್ ಗಳ ರೋಚಕ ಗೆಲುವು ಸಾಧಿಸಿದ ಬಾಂಗ್ಲಾದೇಶ, ಸೂಪರ್-4 ಆಸೆಯನ್ನು ಜೀವಂತವಿರಿಸಿಕೊಂಡಿದೆ.
ಬಿ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತ್ತು. ಆರಂಭಿಕ ಬ್ಯಾಟ್ಸ್ಮನ್ ತನ್ಸೀದ್ ತಮಿಮ್ ಆಕರ್ಷಕ ಅರ್ಧಶತಕ (52) ಗಳಿಸಿದರು. ಬೌಲಿಂಗ್ ನಲ್ಲಿ ಸ್ಪಿನ್ನರ್ ಗಳಾದ ನಸೂಮ್ ಅಹ್ಮದ್ ಹಾಗೂ ರಶೀದ್ ಹುಸೇನ್ ತಲಾ ಎರಡು ವಿಕೆಟ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವೇಗದ ಬೌಲರ್ ಗಳಾದ ಮುಸ್ತಾಫಿರ್ ರಹಮಾನ್ (28ಕ್ಕೆ 3) ಮತ್ತು ತಸ್ಕಿನ್ ಅಹ್ಮದ್ (18ಕ್ಕೆ 2) ಗೆಲುವಿನ ಔಪಚಾರಿಕತೆ ಮುಗಿಸಿದರು. 20 ಓವರ್ ಗಳಲ್ಲಿ ಅಫ್ಘಾನಿಸ್ತಾನ ಎಲ್ಲ ವಿಕೆಟ್ ಕಳೆದುಕೊಂಡು 146 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ಈ ಗೆಲುವಿನಿಂದಾಗಿ ಬಿ ಗುಂಪಿನಿಂದ ಸೂಪರ್ 4 ಹಂತ ತಲುಪುವ ಬಾಂಗ್ಲಾದೇಶದ ಕನಸು ಇನ್ನೂ ಜೀವಂತಾಗಿ ಉಳಿದಿದೆ. ಶ್ರೀಲಂಕಾ ಕೂಡಾ ಬಿ ಗುಂಪಿನಲ್ಲಿದ್ದು, ಅವಕಾಶಗಳು ಎಲ್ಲ ತಂಡಗಳಿಗೂ ಮುಕ್ತವಾಗಿವೆ.
ಎ ಗುಂಪಿನ ಪಂದ್ಯದಲ್ಲಿ ಬುಧವಾರ ಪಾಕಿಸ್ತಾನ ತಂಡ ಯುಎಇ ವಿರುದ್ಧ ನಿರ್ಣಾಯಕ ಪಂದ್ಯ ಆಡಲಿದೆ.





