ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಸರಣಿ ಮುಂದೂಡಿದ ಬಿಸಿಸಿಐ

Photo Credit : PTI
ಮುಂಬೈ, ನ. 18: ಮುಂದಿನ ತಿಂಗಳು ನಡೆಯಬೇಕಾಗಿದ್ದ ಬಾಂಗ್ಲಾದೇಶ ವಿರುದ್ಧದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ತವರು ಸರಣಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದೂಡಿದೆ. ಈ ಅವಧಿಯಲ್ಲಿ ಭಾರತ ತಂಡಕ್ಕೆ ಪರ್ಯಾಯ ಸರಣಿಯೊಂದನ್ನು ಏರ್ಪಡಿಸುವ ಉದ್ದೇಶವನ್ನು ಅದು ಹೊಂದಿದೆ.
ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಬಾಂಗ್ಲಾದೇಶದ ಮಹಿಳಾ ತಂಡದ ವಿರುದ್ಧ ಡಿಸೆಂಬರ್ ನಲ್ಲಿ ಕೋಲ್ಕತಾ ಮತ್ತು ಕಟಕ್ನಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20 ಪಂದ್ಯಗಳನ್ನು ಆಡಬೇಕಾಗಿತ್ತು.
‘‘ಡಿಸೆಂಬರ್ ನಲ್ಲಿ ಪರ್ಯಾಯ ಸರಣಿಯೊಂದನ್ನು ಏರ್ಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ, ಅದರ ವಿವರಗಳನ್ನು ಈಗಲೂ ರೂಪಿಸಲಾಗುತ್ತಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆಡಲು ನಮಗೆ ಅನುಮತಿ ಸಿಕ್ಕಿಲ್ಲ’’ ಎಂದು ಬಿಸಿಸಿಯ ಮೂಲವೊಂದು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆಡಲು ಅನುಮತಿ ಸಿಗದಿರುವುದಕ್ಕೆ ಬಿಸಿಸಿಐ ಮೂಲವು ಯಾವುದೇ ಕಾರಣ ನಿಡಲಿಲ್ಲ. ಆದರೆ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವು ಹದಗೆಟ್ಟಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ ಎನ್ನಲಾಗಿದೆ. ಬಾಂಗ್ಲಾದೇಶದ ಅಂತರರಾಷ್ಟ್ರೀಯ ನ್ಯಾಯಮಂಡಳಿಯೊಂದು ಸೋಮವಾರ ದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾರಿಗೆ ಮರಣ ದಂಡನೆ ವಿಧಿಸಿದೆ. ಹಾಗೂ ಭಾರತದಲ್ಲಿರುವ ಹಸೀನಾರನ್ನು ಬಾಂಗ್ಲಾದೇಶಕ್ಕೆ ಒಪ್ಪಿಸಿ ಎಂಬುದಾಗಿ ಆ ದೇಶವು ಭಾರತಕ್ಕೆ ಮನವಿ ಮಾಡಿದೆ.







