ಶ್ರೀಲಂಕಾ ವಿರುದ್ಧ ಮೊದಲ ಬಾರಿ ಟಿ-20 ಸರಣಿ ಗೆದ್ದ ಬಾಂಗ್ಲಾದೇಶ
ಹರ್ಭಜನ್ ಸಿಂಗ್ ದಾಖಲೆ ಮುರಿದ ಮಹೆದಿ ಹಸನ್

PC : NDTV
ಕೊಲಂಬೊ, ಜು.17: ಆಲ್ ರೌಂಡರ್ ಮಹೆದಿ ಹಸನ್(4-11) ಹಾಗೂ ಆರಂಭಿಕ ಬ್ಯಾಟರ್ ತಂಝೀದ್ ಹಸನ್ ಅವರ ಜೀವನಶ್ರೇಷ್ಠ ಕೊಡುಗೆಗಳ ನೆರವಿನಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡವು ಆತಿಥೇಯ ಶ್ರೀಲಂಕಾ ತಂಡದ ವಿರುದ್ಧ 3ನೇ ಪಂದ್ಯವನ್ನು 8 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿ ಲಂಕಾ ವಿರುದ್ಧ ಟಿ-20 ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.
ಪಲ್ಲೆಕಲೆಯಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಶ್ರೀಲಂಕಾ ಗೆದ್ದುಕೊಂಡಿತ್ತು. ಡಾಂಬುಲ್ಲಾದಲ್ಲಿ 2ನೇ ಪಂದ್ಯವನ್ನು ಜಯಿಸಿದ ಬಾಂಗ್ಲಾದೇಶ ಪುಟಿದೆದ್ದಿತು. ಬಾಂಗ್ಲಾದೇಶ ತಂಡವು 7 ವರ್ಷಗಳ ಹಿಂದೆ 3 ಪಂದ್ಯಗಳ ಟಿ-20 ಸರಣಿಯನ್ನು ಗೆದ್ದುಕೊಂಡಿತ್ತು.
ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಸನ್ (4-1-11-4)ಅವರು ಪ್ರವಾಸಿ ತಂಡದ ಬೌಲರ್ ಹರ್ಭಜನ್ ಸಿಂಗ್ ಅವರ ದೀರ್ಘಕಾಲದ ದಾಖಲೆಯೊಂದನ್ನು ಮುರಿದರು. ಹಸನ್ ಅವರು ಶ್ರೀಲಂಕಾದ ಅಗ್ರ ಸರದಿಯ ಐವರು ಬ್ಯಾಟರ್ಗಳ ಪೈಕಿ ನಾಲ್ವರನ್ನು ಔಟ್ ಮಾಡಿದ್ದಾರೆ.
2ನೇ ಓವರ್ನಲ್ಲಿ ಕುಶಾಲ್ ಮೆಂಡಿಸ್(6 ರನ್)ವಿಕೆಟನ್ನು ಪಡೆಯುದರೊಂದಿಗೆ ಮೆಹದಿ ಅವರ ದಾಖಲೆಯ ಸ್ಪೆಲ್ ಆರಂಭವಾಯಿತು. ಆ ನಂತರ ಅವರು 5ನೇ ಓವರ್ನಲ್ಲಿ ದಿನೇಶ್ ಚಾಂಡಿಮಾಲ್(4 ರನ್) ವಿಕೆಟನ್ನು ಪಡೆದರು. ಶ್ರೀಲಂಕಾದ ನಾಯಕ ಚರಿತ್ ಅಸಲಂಕ (3 ರನ್) ಹಾಗೂ ಆರಂಭಿಕ ಬ್ಯಾಟರ್ ಪಥುಮ್ ನಿಸ್ಸಾಂಕ(46 ರನ್,39 ಎಸೆತ, 4 ಬೌಂಡರಿ)ವಿಕೆಟ್ ಗಳನ್ನು ಉರುಳಿಸಿದರು.
ಈ ಹಿಂದೆ ಪ್ರೇಮದಾಸ ಸ್ಟೇಡಿಯಮ್ ನಲ್ಲಿ ಭಾರತದ ಆಫ್ ಸ್ಪಿನ್ನರ್ ಹರ್ಭಜನ್ಸಿಂಗ್ ಅವರು 2012ರ ಟಿ-20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ 12 ರನ್ಗೆ 4 ವಿಕೆಟ್ಗಳನ್ನು ಪಡೆದಿದ್ದರು. ಶ್ರೀಲಂಕಾದ ವನಿಂದು ಹಸರಂಗ ಪ್ರೇಮದಾಸ ಸ್ಟೇಡಿಯಮ್ ನಲ್ಲಿ ಅತ್ಯುತ್ತಮ ಪ್ರದರ್ಶನ(4-9)ನೀಡಿದ ದಾಖಲೆ ಹೊಂದಿದ್ದಾರೆ. ಇತರ ಬೌಲರ್ಗಳಾದ ಜೋಶ್ ಹೇಝಲ್ವುಡ್(4-16)ಹಾಗೂ ಮುಸ್ತಫಿಝರ್ರಹ್ಮಾನ್(4-21)ಅವರು ಹರ್ಭಜನ್ ಸಿಂಗ್ ಅವರ ದಾಖಲೆ ಮುರಿಯುವ ಸನಿಹ ತಲುಪಿದ್ದರು.
ಮಹೆದಿ ಹಸನ್ 3 ಪಂದ್ಯಗಳ ಸರಣಿಯಲ್ಲಿ ಆಡಿರುವ ಮೊದಲ ಪಂದ್ಯ ಇದಾಗಿರುವ ಕಾರಣ ಈ ಸಾಧನೆ ವಿಶೇಷವಾಗಿದೆ. ಮೆಹದಿ ಹಸನ್ ಮಿರಾಝ್ ಬದಲಿಗೆ ಆಡಿದ ಹಸನ್ ಅವರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಹಸನ್ ಬೌಲಿಂಗ್ ನೆರವಿನಿಂದಾಗಿ ಬಾಂಗ್ಲಾದೇಶ ತಂಡವು ಶ್ರೀಲಂಕಾ ತಂಡವನ್ನು 20 ಓವರ್ ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ ಕೇವಲ 132 ರನ್ಗೆ ನಿಯಂತ್ರಿಸಿತು.
ಗೆಲ್ಲಲು ಸುಲಭ ಸವಾಲು ಪಡೆದ ಬಾಂಗ್ಲಾದೇಶ ಪರ ಆರಂಭಿಕ ಬ್ಯಾಟರ್ ತಂಝೀದ್ ಹಸನ್ ಪ್ರಮುಖ ಪಾತ್ರವಹಿಸಿದರು. ಹಸನ್ 47 ಎಸೆತಗಳಲ್ಲಿ 6 ಸಿಕ್ಸರ್, 1 ಬೌಂಡರಿ ಸಹಿತ ಔಟಾಗದೆ 73 ರನ್ ಗಳಿಸಿದರು. ಬಾಂಗ್ಲಾದೇಶವು 21 ಎಸೆತಗಳು ಬಾಕಿ ಇರುವಾಗಲೇ ಕೇವಲ 2 ವಿಕೆಟ್ ಕಳೆದುಕೊಂಡು ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು. ನಾಯಕ ಲಿಟನ್ ದಾಸ್(32 ರನ್, 26 ಎಸೆತ) ಹಾಗೂ ತೌಹೀದ್ ಹ್ರಿದಾಯ್(ಔಟಾಗದೆ 27,25 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಈ ಗೆಲುವಿನ ಮೂಲಕ ಪ್ರವಾಸಿ ಬಾಂಗ್ಲಾದೇಶ ತಂಡವು ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.







