ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಬಾಂಗ್ಲಾದೇಶದ ಮಹ್ಮೂದುಲ್ಲಾ ನಿವೃತ್ತಿ

ಢಾಕಾ: ಬಾಂಗ್ಲಾದೇಶದ ಹಿರಿಯ ಕ್ರಿಕೆಟಿಗ ಮಹ್ಮೂದುಲ್ಲಾ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪ್ರಕಟಿಸಿದರು. ಈ ಮೂಲಕ 17 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದರು.
39ರ ಹರೆಯದ ಮಹ್ಮೂದುಲ್ಲಾ ಬುಧವಾರ ಸಾಮಾಜಿಕ ಜಾಲತಾಣದ ಮೂಲಕ ನಿವೃತ್ತಿಯ ನಿರ್ಧಾರ ಪ್ರಕಟಿಸಿದರು. ತನ್ನ ಕ್ರಿಕೆಟ್ ಪಯಣದುದ್ದಕ್ಕೂ ಬೆಂಬಲ ನೀಡಿರುವ ತನ್ನ ಸಹ ಆಟಗಾರರು, ಕೋಚ್‌ಗಳು, ಕುಟುಂಬ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು.
‘‘ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ನನಗೆ ಯಾವಾಗಲೂ ಬೆಂಬಲ ನೀಡಿದ ನನ್ನ ಎಲ್ಲ ಸಹ ಆಟಗಾರರು, ಕೋಚ್‌ಗಳು, ವಿಶೇಷವಾಗಿ ನನ್ನ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸುವೆ’’ಎಂದು ಮಹ್ಮೂದುಲ್ಲಾ ಹೇಳಿದ್ದಾರೆ.
ಮಹ್ಮ್ಮೂದುಲ್ಲಾ ನಿವೃತ್ತಿಯ ಮುಖಾಂತರ ಬಾಂಗ್ಲಾದೇಶ ಕ್ರಿಕೆಟ್‌ನ ಒಂದು ಯುಗಾಂತ್ಯವಾಗಿದೆ. ಅವರು ತನ್ನ ದೇಶವನ್ನು 239 ಏಕದಿನ, 50 ಟೆಸ್ಟ್ ಹಾಗೂ 141 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ಬಾಂಗ್ಲಾದೇಶ ತಂಡ ಸಂಕಷ್ಟದಲ್ಲಿದ್ದಾಗ ಆಸರೆಯಾಗುತ್ತಿದ್ದ ಅವರು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೂರು ಶತಕಗಳನ್ನು ಗಳಿಸಿರುವ ಬಾಂಗ್ಲಾದೇಶದ ಏಕೈಕ ಆಟಗಾರನಾಗಿದ್ದಾರೆ. 2015ರ ಆವೃತ್ತಿಯಲ್ಲಿ 2 ಶತಕ ಹಾಗೂ 2023ರ ಆವೃತ್ತಿಯಲ್ಲಿ ಒಂದು ಶತಕವನ್ನು ಗಳಿಸಿದ್ದರು.
2025ರ ಫೆಬ್ರವರಿಯ ನಂತರ ತನ್ನನ್ನು ಕೇಂದ್ರ ಗುತ್ತಿಗೆಗೆ ಪರಿಗಣಿಸದಂತೆ ಮಹ್ಮೂದುಲ್ಲಾ ಈ ಮೊದಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ(ಬಿಸಿಬಿ)ವಿನಂತಿಸಿದ್ದರು.
ಚಾಂಪಿಯನ್ಸ್ ಟ್ರೋಫಿಯ ನಂತರ ಮುಶ್ಫಿಕುರ್ರಹೀಂ ಕೂಡ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.