ಮಿಚೆಲ್ ಸ್ಟಾರ್ಕ್ ದಾಖಲೆ ಮುರಿದ ತೈಜುಲ್ ಇಸ್ಲಾಂ

Photo : timesofindia
ಹೊಸದಿಲ್ಲಿ, ಜೂ.30: ಬಾಂಗ್ಲಾದೇಶದ ಸ್ಪಿನ್ನರ್ ತೈಜುಲ್ ಇಸ್ಲಾಂ, ಹರಾರೆಯಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ತಮ್ಮ ತಂಡ ಹೀನಾಯವಾಗಿ ಸೋತಿದ್ದರೂ, ಪ್ರಮುಖ ವೈಯಕ್ತಿಕ ಮೈಲಿಗಲ್ಲು ತಲುಪಿದ್ದಾರೆ.
ಎಡಗೈ ಸ್ಪಿನ್ನರ್ ಇಸ್ಲಾಂ, ಝಿಂಬಾಬ್ವೆಯ ಮೊದಲ ಇನಿಂಗ್ಸ್ನಲ್ಲಿ 40.2 ಓವರ್ಗಳಲ್ಲಿ 138 ರನ್ ನೀಡಿ ಏಳು ವಿಕೆಟ್ ಉರುಳಿಸಿದ್ದರು. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 19ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದರು.
ಈ ಪ್ರದರ್ಶನದ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಐದು ವಿಕೆಟ್ ಗೊಂಚಲುಗಳನ್ನು ಪಡೆದ ಅಗ್ರ ಐವರು ಎಡಗೈ ಬೌಲರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ತೈಜುಲ್ ಇಸ್ಲಾಂ, ಐದು ವಿಕೆಟ್ ಗೊಂಚಲು ಪಡೆದು ಬಾಂಗ್ಲಾದೇಶದ ಮಾಜಿ ನಾಯಕ ಶಾಕಿಬ್ ಅಲ್ ಹಸನ್ ಅವರ ದಾಖಲೆಯನ್ನು ಸರಿಗಟ್ಟಿದರು. ಈ ಇಬ್ಬರು ಬೌಲರ್ಗಳು ಟೆಸ್ಟ್ ಕ್ರಿಕೆಟ್ನಲ್ಲಿ ತಲಾ 19 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.
ಇಸ್ಲಾಂ ಅವರು ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಮುರಿದರು. ಸ್ಟಾರ್ಕ್ 18 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.
ಬಾಂಗ್ಲಾದೇಶದ ಸ್ಪಿನ್ನರ್ ಕೇವಲ 107 ಟೆಸ್ಟ್ ಇನಿಂಗ್ಸ್ ಗಳಲ್ಲಿ ಈ ಮೈಲಿಗಲ್ಲು ತಲುಪಿದರು. ಶಾಕಿಬ್ ಹಾಗೂ ಸ್ಟಾರ್ಕ್ಗಿಂತ ವೇಗವಾಗಿ ಈ ಸಾಧನೆ ಮಾಡಿದ್ದಾರೆ. ಶಾಕಿಬ್ 121 ಇನಿಂಗ್ಸ್ಗಳಲ್ಲಿ 19 ಬಾರಿ ಐದು ವಿಕೆಟ್ ಗೊಂಚಲು ಪಡೆದರೆ, ಸ್ಟಾರ್ಕ್ 18 ಬಾರಿ ಐದು ವಿಕೆಟ್ ಗೊಂಚಲು ಪಡೆಯಲು 202 ಇನಿಂಗ್ಸ್ ಆಡಿದ್ದರು.
ಶ್ರೀಲಂಕಾದ ದಿಗ್ಗಜ ರಂಗನ ಹೆರಾತ್, 93 ಟೆಸ್ಟ್ ಪಂದ್ಯಗಳಲ್ಲಿ 34 ಐದು ವಿಕೆಟ್ ಗೊಂಚಲುಗಳೊಂದಿಗೆ 433 ವಿಕೆಟ್ ಪಡೆದು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ವಾಸೀಂ ಅಕ್ರಂ (25 ಐದು ವಿಕೆಟ್ ಗೊಂಚಲು, 414 ವಿಕೆಟ್ಗಳು) ಹಾಗೂ ನ್ಯೂಜಿಲೆಂಡ್ನ ದಿಗ್ಗಜ ಡೇನಿಯಲ್ ವೆಟ್ಟೋರಿ (20 ಐದು ವಿಕೆಟ್ ಗೊಂಚಲು, 362 ವಿಕೆಟ್ಗಳು) ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.
ತೈಜುಲ್ ಇಸ್ಲಾಂ ಹಾಗೂ ಶಾಕಿಬ್ ಇದೀಗ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ. ಸ್ಟಾರ್ಕ್ ಆರನೇ ಸ್ಥಾನಕ್ಕೆ ಕುಸಿದಿದ್ದಾರೆ. ತೈಜುಲ್ ಇದೀಗ 60 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 270 ವಿಕೆಟ್ ಪಡೆದಿದ್ದಾರೆ.






