ಅಶ್ವಿನ್ ವಿರುದ್ಧ ಸೆಹ್ವಾಗ್ ರಿಂದ ಕಳಪೆ ಅಭಿರುಚಿಯ ಅಪಹಾಸ್ಯ: ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀವ್ರ ಆಕ್ಷೇಪ

ವಿರೇಂದ್ರ ಸೆಹ್ವಾಗ್, ಆರ್. ಅಶ್ವಿನ್ | Photo Credit ; X
ಮುಂಬೈ: ಮಾರ್ಚ್ 28ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ವೇಳೆ ಭಾರತ ತಂಡದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ಜಿಯೋಸ್ಟಾರ್ ಮೂಲಕ ವೀಕ್ಷಕ ವಿವರಣೆಗಾರರಾಗಿ ಪದಾರ್ಪಣೆ ಮಾಡಿದರು. ಆದರೆ, ಈ ವೇಳೆ ಅವರೊಂದಿಗಿದ್ದ ಮತ್ತೊಬ್ಬ ಭಾರತೀಯ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಮಾಡಿದ ಅಪಹಾಸ್ಯಕ್ಕೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ವೀಕ್ಷಕ ವಿವರಣೆಗಾರರ ಬಾಕ್ಸ್ ನಲ್ಲಿ ಕುಳಿತಿದ್ದ ಈ ಇಬ್ಬರು ಮಾಜಿ ಆಟಗಾರರು, ವೀಕ್ಷಕ ವಿವರಣೆಯ ನಡುವೆ ಪರಸ್ಪರ ಲಘು ಧಾಟಿಯಲ್ಲಿ ಮಾತುಕತೆ ಆರಂಭಿಸಿದರು. ಇದು ಕೆಲವೇ ಕ್ಷಣಗಳಲ್ಲಿ ಕಹಿ ಮಾತಿನ ವಿನಿಮಯವಾಗಿ ರೂಪಾಂತರಗೊಂಡಿತು. ಬಳಿಕ, ವಿರೇಂದ್ರ ಸೆಹ್ವಾಗ್ ಪಂದ್ಯವನ್ನು ವಿಶ್ಲೇಷಿಸುವ ಬದಲು ಖಾಸಗಿ ವಿಷಯಗಳನ್ನು ಪ್ರಸ್ತಾಪಿಸಲು ಆರಂಭಿಸಿದರು. ಈ ಪೈಕಿ ಕೆಲವು ಮಾತುಗಳು ಅಶ್ವಿನ್ ಅವರನ್ನು ಗುರಿಯಾಗಿಸಿಕೊಂಡಿದ್ದವು.
ಈ ಪೈಕಿ ವೈರಲ್ ಆಗಿರುವ ಒಂದು ಘಟನೆಯ ಬಗ್ಗೆ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುವಾಗ ವಿರೇಂದ್ರ ಸೆಹ್ವಾಗ್, “ನಿನ್ನ ತಲೆಯನ್ನು ಸ್ವಲ್ಪ ಉಪಯೋಗಿಸು” ಎಂದು ಕಿಚಾಯಿಸಿದ್ದಾರೆ. ಆರಂಭದಲ್ಲಿ ಅಪಹಾಸ್ಯದಂತಿದ್ದ ಈ ಮಾತುಕತೆಗಳನ್ನು ಸೆಹ್ವಾಗ್ ಅಗತ್ಯಕ್ಕಿಂತ ಹೆಚ್ಚು ಮುಂದಕ್ಕೆ ಕೊಂಡೊಯ್ಯುತ್ತಿದ್ದಂತೆ, ವಿಚಿತ್ರ ಮೌನ ಆವರಿಸಿದೆ.
“ನಾವು ಇಂದು ಹೃದಯದಿಂದ ಮಾತನಾಡುತ್ತೇವೆಯೇ ಹೊರತು ತಾರ್ಕಿಕತೆ ಅಥವಾ ಜಾಗರೂಕ ಯೋಚನೆ ಮಾಡುವುದಿಲ್ಲ” ಎಂದು ಸೆಹ್ವಾಗ್ ವ್ಯಂಗ್ಯವಾಡಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಅಶ್ವಿನ್, “ಮಾತನಾಡುವುದಕ್ಕೂ ಮುನ್ನ ಯೋಚಿಸಬೇಕು ಎಂದು ನನಗೆ ನನ್ನ ಪೋಷಕರು ಕಲಿಸಿಕೊಟ್ಟಿದ್ದಾರೆ. ನಾನು ಯಾವುದನ್ನೂ ಯೋಚಿಸದೆ ಮಾತನಾಡುವುದಿಲ್ಲ. ಆದರೆ ನೀವು ಅದರ ವಿರುದ್ಧವಾಗಿ ವರ್ತಿಸಲು ಹೇಳುತ್ತಿದ್ದೀರಿ” ಎಂದು ತಿರುಗೇಟು ನೀಡಿದರು.
ಬಳಿಕ ಅಶ್ವಿನ್ ಅವರನ್ನು ಗುರಿಯಾಗಿಸಿಕೊಂಡು ನೇರ ವಾಗ್ದಾಳಿ ನಡೆಸಿದ ಸೆಹ್ವಾಗ್, “ಕೆಲವರು ಮಾತನಾಡುವುದಕ್ಕೂ ಮುನ್ನ ಉದ್ದೇಶಪೂರ್ವಕವಾಗಿ ಯೋಚಿಸುತ್ತಾರೆ. ಈ ಆಟಗಾರನಿಗೆ ನನಗಿಂತ ಹೆಚ್ಚು ಅಭಿಮಾನಿಗಳಿದ್ದಾರೆ. ನಾನು ಈತನ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದರೆ, ನನ್ನ ಫಾಲೋವರ್ ಗಳು ಕಡಿಮೆಯಾಗಬಹುದು. ಸಕಾರಾತ್ಮಕವಾಗಿ ಮಾತನಾಡಿದರೆ, ಅವು ಹೆಚ್ಚಾಗಬಹುದು” ಎಂದು ವ್ಯಂಗ್ಯವಾಡಿದರು.
ಈ ಮಾತುಕತೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಭಿಮಾನಿಗಳು, ಐಪಿಎಲ್ ಋತುವಿನ ಪ್ರಥಮ ಪಂದ್ಯದಲ್ಲೇ ಕಳಪೆ ಗುಣಮಟ್ಟದ ವೀಕ್ಷಕ ವಿವರಣೆ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಸೆಹ್ವಾಗ್ ಸೇರಿದಂತೆ ಹಿಂದಿ ವೀಕ್ಷಕ ವಿವರಣೆಗಾರರ ಮೇಲೆ ಟೀಕೆಗಳು ವ್ಯಕ್ತವಾಗಿವೆ. ಇತ್ತೀಚೆಗೆ ಟೀಕೆಗೆ ಗುರಿಯಾಗಿದ್ದ ವೀಕ್ಷಕ ವಿವರಣೆಗಾರರಾದ ನವಜೋತ್ ಸಿಂಗ್ ಸಿಧು ಮತ್ತು ಆಕಾಶ್ ಚೋಪ್ರಾ ಅವರ ಬೆನ್ನಿಗೇ ಈ ಟೀಕೆಗಳು ಕೇಳಿಬಂದಿವೆ.
ವಾಸ್ತವವಾಗಿ, ತನ್ನ ವಿರುದ್ಧ ದ್ವೇಷ ಅಭಿಯಾನ ನಡೆಯುತ್ತಿದೆ ಎಂದು ಆಕಾಶ್ ಚೋಪ್ರಾ ವಿಶ್ವಕಪ್ ಸಂದರ್ಭದಲ್ಲಿ ಸಾರ್ವಜನಿಕ ಹೇಳಿಕೆ ನೀಡಿದ್ದರು. ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಮನರಂಜನೆ ಮತ್ತು ನೇರ ಪ್ರಸಾರದ ವೀಕ್ಷಕ ವಿವರಣೆಯಲ್ಲಿ ಇರಬೇಕಾದ ಸಮತೋಲನದ ಕಡೆ ಎಲ್ಲರ ಗಮನ ಸೆಳೆದಿದೆ. ಐಪಿಎಲ್ ನಂತಹ ದೊಡ್ಡ ಕ್ರೀಡಾಕೂಟದ ವೇಳೆ, ವೀಕ್ಷಕ ವಿವರಣೆಯಲ್ಲಿ ಖಾಸಗಿ ವಿಷಯಗಳ ಅಪಹಾಸ್ಯದ ಬದಲು ಸಮರ್ಥ ಹಾಗೂ ಒಳನೋಟಪೂರ್ಣ ವಿಶ್ಲೇಷಣೆ ಇರಬೇಕು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಆಗ್ರಹಿಸಿದ್ದಾರೆ.






