11 ಪಂದ್ಯಗಳಲ್ಲಿ ಅಜೇಯ: ನಾಯಕತ್ವದಿಂದ ಗಮನ ಸೆಳೆದ ಬವುಮಾ

ಟೆಂಬಾ ಬವುಮಾ | Photo Credit : PTI
ಹೊಸದಿಲ್ಲಿ, ನ.16: ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಎಲ್ಲ ನಿರೀಕ್ಷೆಯನ್ನು ಮೀರಿ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು 30 ರನ್ ನಿಂದ ಮಣಿಸಿ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
124 ರನ್ ಚೇಸ್ ವೇಳೆ ಎಡವಿದ ಭಾರತವು 35 ಓವರ್ ಗಳಲ್ಲಿ ಕೇವಲ 93 ರನ್ ಗೆ ಆಲೌಟಾಯಿತು. ಸ್ವದೇಶದ ಪಿಚ್ನಲ್ಲಿ ಉತ್ತಮ ಸ್ಪಿನ್ ಬೌಲಿಂಗ್ ಎದುರು ಪರದಾಟ ನಡೆಸುವುದನ್ನು ಮುಂದುವರಿಸಿದೆ.
ಭಾರತ ನೆಲದಲ್ಲಿ 15 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ತಂಡ ಗೆಲುವು ದಾಖಲಿಸಲು ನಾಯಕತ್ವವಹಿಸಿರುವ ಟೆಂಬಾ ಬವುಮಾ ಎಲ್ಲರ ಗಮನ ಸೆಳೆದಿದ್ದಾರೆ. ನಾಯಕನಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಅಜೇಯ ದಾಖಲೆಯನ್ನು ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ನಾಯಕತ್ವ ಹೊಣೆವಹಿಸಿಕೊಂಡ ನಂತರ ಆಡಿರುವ 11 ಪಂದ್ಯಗಳ ಪೈಕಿ 10ರಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದೆ. ಆಸ್ಟ್ರೇಲಿಯ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆಲುವಿನ ದಾಖಲೆ ಕೂಡ ಇದರಲ್ಲಿದೆ.
ಕೋಲ್ಕತಾ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಗಳನ್ನು ಪಡೆದಿರುವ ಸೈಮರ್ ಹಾರ್ಮರ್ ಅವರು ಭಾರತದ ಸ್ಪಿನ್ನರ್ ಗಳಾದ ರವೀಂದ್ರ ಜಡೇಜ, ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ರನ್ನು ಮೀರಿ ನಿಂತರು.
ಭಾರತ ತಂಡ ಸ್ವದೇಶದಲ್ಲಿ ಹಿಂದಿನ 6 ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನೇ ಸೋಲು ಕಂಡಿದೆ. ಕಳೆದ ವರ್ಷ ನ್ಯೂಝಿಲ್ಯಾಂಡ್ ವಿರುದ್ಧ ಆಡಿದ್ದ ಮೂರೂ ಪಂದ್ಯಗಳನ್ನು ಸೋತಿತ್ತು.





