ದಕ್ಷಿಣ ಆಫ್ರಿಕಾ ಕ್ರಿಕೆಟ್ ಗೆ ಭರವಸೆ ತುಂಬಿದ ʼಅಜೇಯʼ ಟೆಂಬಾ ಬವುಮಾ

ಟೆಂಬಾ ಬವುಮಾ | Photo Credit : PTI
ಹೊಸದಿಲ್ಲಿ, ನ.26: ಗುವಾಹಟಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು 408 ರನ್ ಗಳ ಅಂತರದಿಂದ ಮಣಿಸಿ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಗೈದಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ನಾಯಕತ್ವದಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿರುವ ಟೆಂಬಾ ಬವುಮಾ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
ಜೂನ್ ನಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಸ್ಟ್ರೇಲಿಯ ತಂಡವನ್ನು ಮಣಿಸಿದ್ದ ದಕ್ಷಿಣ ಆಫ್ರಿಕಾ ಕೊನೆಗೂ 27 ವರ್ಷಗಳ ನಂತರ ಐಸಿಸಿ ಟ್ರೋಫಿಯೊಂದನ್ನು ಗೆದ್ದುಕೊಂಡಿತು. 1998ರ ನಂತರ ದಕ್ಷಿಣ ಆಫ್ರಿಕಾದ ಯಾವ ನಾಯಕನೂ ಜಾಗತಿಕ ಪ್ರಶಸ್ತಿಯನ್ನು ಎತ್ತಿ ಹಿಡಿದಿರಲಿಲ್ಲ. ದಕ್ಷಿಣ ಆಫ್ರಿಕಾದ ಯಾವೊಬ್ಬ ನಾಯಕನೂ 25 ವರ್ಷಗಳಿಂದ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿರಲಿಲ್ಲ. ಟೆಂಬಾ ಬವುಮಾ ಈ ಎರಡು ಸಾಧನೆಯನ್ನು ಮಾಡಿದ್ದಾರೆ.
2025 ದಕ್ಷಿಣ ಆಫ್ರಿಕಾ ತಂಡದ ಪಾಲಿಗೆ ಮರೆಯಲಾರದ ವರ್ಷವಾಗಿದೆ. ಕಳೆದ ಹಲವು ವರ್ಷಗಳಿಂದ ದಕ್ಷಿಣ ಆಫ್ರಿಕಾ ತಂಡ ಪ್ರಮುಖ ಪ್ರಶಸ್ತಿಯ ಹಾದಿಯಲ್ಲಿ ಸಾಕಷ್ಟು ಬಾರಿ ಎಡವಿತ್ತು. ಆದರೆ ಅದು ತನ್ನ ಪ್ರಯತ್ನವನ್ನು ಮುಂದುವರಿಸುತ್ತಾ ಬಂದಿತ್ತು. ಆತ್ಮವಿಶ್ವಾಸದೊಂದಿಗೆ ಭಾರತಕ್ಕೆ ಆಗಮಿಸಿದ್ದ ಆಫ್ರಿಕನ್ನರು ಐತಿಹಾಸಿಕ ಸಾಧನೆಯೊಂದಿಗೆ ತಾಯ್ನಾಡಿಗೆ ಮರಳುತ್ತಿದ್ದಾರೆ.
ಕೋಲ್ಕತಾದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಬ್ಯಾಟರ್ ಗಳು ರನ್ ಗಳಿಸಲು ತಿಣುಕಾಡುತ್ತಿದ್ದಾಗ ಅರ್ಧಶತಕ ಗಳಿಸಿದ ಬವುಮಾ ತನ್ನ ತಂಡವು 30 ರನ್ ನಿಂದ ರೋಚಕವಾಗಿ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಕೋಸಾ ಭಾಷೆಯಲ್ಲಿ ಟೆಂಬಾ ಎಂದರೆ ಭರವಸೆ ಎಂದರ್ಥ. ಬವುಮಾಗೆ ಅವರ ಅಜ್ಜಿ ಈ ಹೆಸರು ಇಟ್ಟಿದ್ದರು. ಬವುಮಾ ದೇಶಕ್ಕೆ ಅತ್ಯಂತ ಅಗತ್ಯವಿದ್ದಾಗ ಭರವಸೆ ತುಂಬಿದ್ದಾರೆ. 12 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಿರುವ ಬವುಮಾ 11ರಲ್ಲಿ ಗೆಲುವು ಹಾಗೂ 1ರಲ್ಲಿ ಡ್ರಾ ಸಾಧಿಸಿ ಅಜೇಯವಾಗುಳಿದಿದ್ದಾರೆ.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದಿರುವ ಬವುಮಾ ಅವರು ಇದೀಗ ಭಾರತ ನೆಲದಲ್ಲಿ ಅಪರೂಪದ ಟೆಸ್ಟ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ. ದಕ್ಷಿಣ ಆಫ್ರಿಕಾವು 2000ರಲ್ಲಿ ಹ್ಯಾನ್ಸಿ ಕ್ರೋನಿಯೆ ನಾಯಕತ್ವದ ಮಾತ್ರ ಭಾರತ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ದಕ್ಷಿಣ ಆಫ್ರಿಕಾವು ಭಾರತ ನೆಲದಲ್ಲಿ 2015 ಹಾಗೂ 2019ರಲ್ಲಿ ಟೆಸ್ಟ್ ಸರಣಿಯನ್ನು ಸೋತಿತ್ತು.
ಟೆಸ್ಟ್ ನಾಯಕನಾಗಿ ಅಜೇಯ ದಾಖಲೆಯೊಂದಿಗೆ ಬವುಮಾ ಇದೀಗ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ತಂಡವು ಎರಡನೇ ಟೆಸ್ಟ್ನ ಮೊದಲ ಇನಿಂಗ್ಸ್ ನಲ್ಲಿ 489 ರನ್ ಗಳಿಸಿದ ನಂತರ ಭಾರತ ತಂಡವನ್ನು 201 ರನ್ಗೆ ನಿಯಂತ್ರಿಸಿತು. ಆಗ ಭಾರತಕ್ಕೆ ಫಾಲೋ ಆನ್ ಹೇರದ ಬವುಮಾ ಅವರು 2ನೇ ಇನಿಂಗ್ಸ್ ಆರಂಭಿಸಲು ಒತ್ತು ನೀಡಿದರು. ಟ್ರಿಸ್ಟನ್ ಸ್ಟಬ್ಸ್ ಶತಕ ತಲುಪುವುದನ್ನು ಕಾದ ಪರಿಣಾಮ ಎರಡನೇ ಇನಿಂಗ್ಸ್ ಅನ್ನು ತಡವಾಗಿ ಡಿಕ್ಲೇರ್ ಮಾಡಲಾಯಿತು. ಬವುಮಾರ ಈ ನಿರ್ಧಾರವನ್ನು ಕೆಲವರು ಪ್ರಶ್ನಿಸಿದ್ದರು. ಐದನೇ ದಿನದಾಟದಲ್ಲಿ ಆರು ವಿಕೆಟ್ಗಳನ್ನು ಕಬಳಿಸಿ ಮೆರೆದಾಡಿದ ಸ್ಪಿನ್ನರ್ ಸೈಮನ್ ಹಾರ್ಮರ್ ನಾಯಕನ ನಿರ್ಧಾರವನ್ನು ಸಮರ್ಥಿಸಿ ಆಫ್ರಿಕಾ ತಂಡದ ಭರ್ಜರಿ ಗೆಲುವಿನ ಹಾದಿ ಸುಗಮಗೊಳಿಸಿದರು.







