ಶಾಸನದ ವ್ಯಾಪ್ತಿಗೆ ಸೇರಲಿರುವ ಬಿಸಿಸಿಐ

PC :@BCCI
ಹೊಸದಿಲ್ಲಿ: ಸರಕಾರವು ಬಹುನಿರೀಕ್ಷಿತ ‘ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ 2025’ನ್ನು ಇಂದು ಸಂಸತ್ತಿನಲ್ಲಿ ಮಂಡಿಸಲಿದೆ. ಮಸೂದೆಯ ಅಂಗೀಕಾರವು ರಾಷ್ಟ್ರೀಯ ಕ್ರೀಡಾ ಒಕ್ಕೂಟ(ಎನ್ಎಸ್ಎಫ್)ಗಳ ಪಾರದರ್ಶಕ ಮತ್ತು ನ್ಯಾಯಸಮ್ಮತ ಕಾರ್ಯ ನಿರ್ವಹಣೆಗೆ ಕಾನೂನು ಚೌಕಟ್ಟನ್ನು ಸೃಷ್ಟಿಸುತ್ತದೆ ಹಾಗೂ ಸುರಕ್ಷಿತ ಕ್ರೀಡಾ ಮತ್ತು ಕುಂದುಕೊರತೆ ಪರಿಹಾರ ವ್ಯವಸ್ಥೆಗಳ ಮೂಲಕ ಕ್ರೀಡಾಪಟುಗಳನ್ನು ರಕ್ಷಿಸುತ್ತದೆ ಎಂಬ ಭರವಸೆಯನ್ನು ಸರಕಾರವು ಹೊಂದಿದೆ.
ಕ್ರೀಡೆ, ಕ್ರೀಡಾಪಟುಗಳ ಕಲ್ಯಾಣ ಮತ್ತು ನೈತಿಕ ಅಭ್ಯಾಸಗಳಿಗೆ ಉತ್ತೇಜನ, ಎನ್ಎಸ್ಎಫ್ಗಳ ಆಡಳಿತಕ್ಕಾಗಿ ಮಾನದಂಡಗಳು ಹಾಗೂ ಆಡಳಿತಾತ್ಮಕ ವಿವಾದಗಳನ್ನು ಬಗೆಹರಿಸಲು ಕ್ರಮಗಳನ್ನು ಒದಗಿಸುವುದು ಮಸೂದೆಯ ಉದ್ದೇಶವಾಗಿದೆ.
ಸರಕಾರವು ಲೋಕಸಭೆಯಲ್ಲಿ ಆಡಳಿತ ಮಸೂದೆಯ ಜೊತೆಗೆ ‘ರಾಷ್ಟ್ರೀಯ ಡೋಪಿಂಗ್(ಉದ್ದೀಪನ ಮದ್ದು ಸೇವನೆ) ನಿಗ್ರಹ(ತಿದ್ದುಪಡಿ) ಮಸೂದೆ, 2025’ನ್ನೂ ಮಂಡಿಸಲಿದೆ. ವಿಶ್ವ ಡೋಪಿಂಗ್ ನಿಗ್ರಹ ಸಂಸ್ಥೆ(ವಾಡಾ)ಯ ಸಂಹಿತೆ ಮತ್ತು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ 2022ರ ಡೋಪಿಂಗ್ ನಿಗ್ರಹ ಕಾಯ್ದೆಯನ್ನು ತರುವುದು ಹಾಗೂ ಡೋಪಿಂಗ್ ನಿಗ್ರಹ ಶಿಸ್ತು ಸಮಿತಿ(ಎಡಿಡಿಪಿ) ಮತ್ತು ಡೋಪಿಂಗ ನಿಗ್ರಹ ಮೇಲ್ಮನವಿಗಳ ಸಮಿತಿ(ಎಡಿಎಪಿ)ಗಳು ಸ್ವತಂತ್ರವಾಗಿ ಕಾರ್ಯಾಚರಿಸುವಂತೆ ನೋಡಿಕೊಳ್ಳುವುದು ಈ ಮಸೂದೆಯ ಗುರಿಯಾಗಿದೆ.
ಈ ಹಿಂದೆ ಪ್ರಸ್ತಾವಿತ ಶಾಸನದ ಬಗ್ಗೆ ಒಮ್ಮತವನ್ನು ರೂಪಿಸುವಲ್ಲಿ ವೈಫಲ್ಯದ ಬಳಿಕ ಆಡಳಿತ ಮಸೂದೆಯನ್ನು ಸಚಿವ ಸಂಪುಟ ಎರಡು ಸಲ ಮತ್ತು ಸಂಸತ್ತು ಒಮ್ಮೆ ಮರಳಿಸಿರುವುದರಿಂದ ಈ ಮಸೂದೆಯ ಅಂಗೀಕಾರವು ಬಿಜೆಪಿ ನೇತೃತ್ವದ ಎನ್ಡಿಎ ಸರಕಾರಕ್ಕೆ ಒಂದು ಪ್ರಮುಖ ಸಾಧನೆಯಾಗಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ಎಸ್ಎಸ್ಎಫ್ ಆಗಿ ಶಾಸನದ ವ್ಯಾಪ್ತಿಗೊಳಪಡುವುದು ಮಸೂದೆಯ ಮುಖ್ಯಾಂಶಗಳಲ್ಲಿ ಒಂದಾಗಿದೆ. ಮಸೂದೆಯು ಕಾಯ್ದೆಯಾದ ಬಳಿಕ ಬಿಸಿಸಿಐ ಇತರ ಯಾವುದೇ ಕ್ರೀಡಾ ಒಕ್ಕೂಟದಂತೆ ಮಾನ್ಯತೆಗಾಗಿ ಪ್ರತಿ ವರ್ಷ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೂ ಹಾಲಿ ನಡೆಯುತ್ತಿರುವ ಹಾಗೂ ಭವಿಷ್ಯದ ಎಲ್ಲ ಮೊಕದ್ದಮೆಗಳನ್ನು ಪ್ರಸ್ತಾವಿತ ‘ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ’ಯು ಇತ್ಯರ್ಥಗೊಳಿಸುತ್ತದೆ.
ಬಿಸಿಸಿಐ ಮತ್ತು ಅದಕ್ಕೆ ಸಂಯೋಜಿತ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಯಾವುದೇ ವಿವಾದದ ಸಂದರ್ಭದಲ್ಲಿ ದೇಶದಲ್ಲಿಯ ವಿವಿಧ ನ್ಯಾಯಾಲಯಗಳನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಸೆಪ್ಟಂಬರ್ನಲ್ಲಿ ಬಿಸಿಸಿಐ ಚುನಾವಣೆಗಳು ನಡೆದ ಬಳಿಕ ಅದು ಸರಕಾರದ ನಿಧಿಯನ್ನು ಅವಲಂಬಿಸಿರದಿದ್ದರೂ ಶೀಘ್ರದಲ್ಲಿಯೇ ರಚನೆಯಾಗಲಿರುವ ‘ರಾಷ್ಟ್ರೀಯ ಕ್ರೀಡಾ ಮಂಡಳಿ’ಯಿಂದ ಮಾನ್ಯತೆಯನ್ನು ಪಡೆದುಕೊಳ್ಳಬೇಕಾಗುತ್ತದೆ.
ಎನ್ಎಸ್ಎಫ್ ಚುನಾವಣೆಗಳು ಮತ್ತು ಕ್ರೀಡಾಪಟುಗಳ ಆಯ್ಕೆಗಳ ಬಳಿಕ ಪದೇ ಪದೇ ಹುಟ್ಟಿಕೊಳ್ಳುವ ಮೊಕದ್ದಮೆಗಳು;ವಿವಾದ ಪರಿಹಾರಕ್ಕೆಂದೇ ಮೀಸಲಾದ ವೇದಿಕೆಯ ಕೊರತೆ;ಒಕ್ಕೂಟಗಳಲ್ಲಿ ಕ್ರೀಡಾಪಟುಗಳ ದುರ್ಬಲ ಅಥವಾ ಸಾಂಕೇತಿಕ ಪ್ರಾತಿನಿಧ್ಯ;ಕ್ರೀಡಾ ನಾಯಕತ್ವದಲ್ಲಿ ಲಿಂಗ ಅಸಮತೋಲನ;ಒಕ್ಕೂಟಗಳಲ್ಲಿ ಯಾವುದೇ ಪ್ರಮಾಣಿತ ಚುನಾವಣಾ ಪ್ರಕ್ರಿಯೆಯ ಅನುಪಸ್ಥಿತಿ;ಎನ್ಎಸ್ಎಫ್ಗಳಲ್ಲಿ ಆರ್ಥಿಕ ಅಪಾರದರ್ಶಕತೆ ಮತ್ತು ಕಳಪೆ ಆಡಳಿತ;ಆಂತರಿಕ ಕುಂದುಕೊರತೆಗಳ ಪರಿಹಾರ ವ್ಯವಸ್ಥೆಗಳ ಅನುಪಸ್ಥಿತಿ;ಬಹು ನ್ಯಾಯಾಲಯಗಳ ಹಸ್ತಕ್ಷೇಪದಿಂದಾಗಿ ಕ್ರೀಡಾ ಕಾರ್ಯಕ್ರಮಗಳಲ್ಲಿ ವಿಳಂಬ;ಸುರಕ್ಷಿತ ಕ್ರೀಡಾ ಕಾರ್ಯವಿಧಾನಗಳಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲದಿರುವುದು;ಈವರೆಗೆ ಸಂಹಿತೆಯ ನಿಬಂಧನೆಗಳ ಸೀಮಿತ ಅನುಷ್ಠಾನ;ಭಾರತೀಯ ಕ್ರೀಡೆಗಳನ್ನು ಕಾಡುತ್ತಿರುವ ಈ 10 ಸಮಸ್ಯೆಗಳನ್ನು ಬಗೆಹರಿಸುವುದು ಮಸೂದೆಯ ಉದ್ದೇಶವಾಗಿದೆ.
ಸರಕಾರವು ಬಿಸಿಸಿಐ ಸೇರಿದಂತೆ ಯಾವುದೇ ಎನ್ಎಸ್ಎಫ್ ಅನ್ನು ನಿಯಂತ್ರಿಸುತ್ತದೆ ಎಂದು ಮಸೂದೆಯು ಅರ್ಥೈಸುವುದಿಲ್ಲ. ಉತ್ತಮ ಆಡಳಿತವನ್ನು ಖಚಿತಪಡಿಸುವುದು ಮಾತ್ರ ಸರಕಾರದ ಉದ್ದೇಶವಾಗಿದೆ. ಈ ಸಂಸ್ಥೆಗಳ ಸ್ವಾಯತ್ತತೆಗೆ ಯಾವುದೇ ಚ್ಯುತಿಯುಂಟಾಗುವುದಿಲ್ಲ ಎಂದು ಕ್ರೀಡಾ ಸಚಿವಾಲಯದ ಅಧಿಕಾರಿಗಳು ತಿಳಿಸಿದರು.
ಮಸೂದೆಯು ವಿವಾದಾತ್ಮಕ ವಯಸ್ಸು ಮತ್ತು ಅವಧಿ ನಿಬಂಧನೆಗಳಲ್ಲಿ ಸಡಿಲಿಕೆಯನ್ನು ಒದಗಿಸುತ್ತದೆ. ಅಧ್ಯಕ್ಷ,ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸೇರಿದಂತೆ ಎನ್ಎಸ್ಎಫ್ಗಳ ಪದಾಧಿಕಾರಿಗಳು 70 ವರ್ಷ ಪ್ರಾಯದ ಬಳಿಕವೂ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ.







