ಬಿಸಿಸಿಐಯ ನಿವ್ವಳ ಬ್ಯಾಂಕ್ ಉಳಿತಾಯ 20,686 ಕೋಟಿ ರೂಪಾಯಿಗೆ ಏರಿಕೆ

PTI Photo
ಮುಂಬೈ, ಸೆ. 7: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಕಳೆದ ಐದು ವರ್ಷಗಳ ಅವಧಿಯಲ್ಲಿ 14,627 ಕೋಟಿ ರೂಪಾಯಿ ನಿವ್ವಳ ಆದಾಯ ಗಳಿಸಿದೆ. ಇದರಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಅದು ಗಳಿಸಿದ 4,193 ಕೋಟಿ ರೂ. ಸೇರಿದೆ ಎಂದು ‘ಕ್ರಿಕ್ಬಝ್’ ವರದಿಯೊಂದು ಹೇಳಿದೆ. ಇದರೊಂದಿಗೆ ಅದರ ನಗದು ಮತ್ತು ಬ್ಯಾಂಕ್ ಗಳಲ್ಲಿರುವ ಉಳಿತಾಯ ಮೊತ್ತ 20,686 ಕೋಟಿ ರೂ.ಗೆ ಏರಿದೆ.
ರಾಜ್ಯ ಘಟಕಗಳಿಗೆ ನೀಡಬೇಕಾಗಿರುವ ಎಲ್ಲಾ ಹಣವನ್ನು ನೀಡಿದ ಬಳಿಕ ಈ ಏರಿಕೆ ದಾಖಲಾಗಿದೆ. ಬಿಸಿಸಿಐಯ ಸಾಮಾನ್ಯ ನಿಧಿಯು 2019ರಲ್ಲಿ ಇದ್ದ 3,906 ಕೋಟಿ ರೂ.ಗಿಂತ 2024ರಲ್ಲಿ ಬಹುತೇಕ ದ್ವಿಗುಣ, ಅಂದರೆ 7,988 ಕೋಟಿ ರೂ. ಆಗಿದೆ. ರಾಜ್ಯ ಅಸೋಸಿಯೇಶನ್ಗಳಿಗೆ ನೀಡಲಾಗಿರುವ ಮಾಹಿತಿಗಳನ್ನು ಉಲ್ಲೇಖಿಸಿ ಕ್ರಿಕ್ಬಝ್ ಇದನ್ನು ವರದಿ ಮಾಡಿದೆ.
ತೆರಿಗೆ ಪಾವತಿಯ ವಿಷಯದಲ್ಲಿ ಬಿಸಿಸಿಐಯು ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ಮೊಕದ್ದಮೆಗಳನ್ನು ದಾಖಲಿಸಿದ್ದರೂ, 2023-24ರ ಆರ್ಥಿಕ ವರ್ಷದ ತೆರಿಗೆ ಪಾವತಿಗಾಗಿ 3,150 ಕೋಟಿ ರೂ. ಮೊತ್ತವನ್ನು ತೆಗೆದಿರಿಸಿದೆ ಎಂಬುದಾಗಿಯೂ ಬಿಸಿಸಿಐ ತನ್ನ ವಾರ್ಷಿಕ ಮಹಾಸಭೆಯಲ್ಲಿ ಹೇಳಿದೆ.





