BCCI ಮಾಜಿ ಅಧ್ಯಕ್ಷ ಐ.ಎಸ್. ಬಿಂದ್ರಾ ನಿಧನ

ಐ.ಎಸ್. ಬಿಂದ್ರಾ | Photo Credit : ICC
ಚೆನ್ನೈ, ಜ.26: ಐ.ಎಸ್. ಬಿಂದ್ರಾ ಎಂದೇ ಜನಪ್ರಿಯರಾಗಿದ್ದ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಇಂದರ್ಜಿತ್ ಸಿಂಗ್ ಬಿಂದ್ರಾ ರವಿವಾರ ಹೊಸದಿಲ್ಲಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಜಯ್ ಶಾ ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ದೃಢಪಡಿಸಿದರು.
‘‘ಮಾಜಿ ಬಿಸಿಸಿಐ ಅಧ್ಯಕ್ಷ ಹಾಗೂ ಭಾರತೀಯ ಕ್ರಿಕೆಟ್ ಆಡಳಿತದ ದಿಗ್ಗಜ ಐ.ಎಸ್. ಬಿಂದ್ರಾ ನಮ್ಮನ್ನು ಅಗಲಿದ್ದು, ಅವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತೇನೆ. ಅವರ ಪರಂಪರೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿದೆ. ಓಂ ಶಾಂತಿ’’ ಎಂದು ಶಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಹಾಗೂ ಯುವರಾಜ್ ಸಿಂಗ್ ಅವರು ಬಿಂದ್ರಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಬಿಂದ್ರಾ ಅವರು 1993ರಿಂದ 1996ರ ತನಕ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1978ರಿಂದ 2014ರ ತನಕ ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ)ಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಆಡಳಿತಗಾರನಾಗಿ ಅವರ ಸೇವೆಗಳನ್ನು ಗುರುತಿಸಿ ಮೊಹಾಲಿಯ ಪಿಸಿಎ ಸ್ಟೇಡಿಯಂಗೆ ‘ಐ.ಎಸ್. ಬಿಂದ್ರಾ ಸ್ಟೇಡಿಯಂ’ ಎಂದು ಮರುನಾಮಕರಣಗೊಳಿಸಲಾಗಿದೆ.
ಶರದ್ ಪವಾರ್ ಐಸಿಸಿ ಅಧ್ಯಕ್ಷರಾಗಿದ್ದಾಗ ಬಿಂದ್ರಾ ಅವರು ಪ್ರಮುಖ ಸಲಹೆಗಾರನಾಗಿ ಕಾರ್ಯನಿರ್ವಹಿಸಿದ್ದರು.
1987ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಶ್ರೇಯಸ್ಸು ಬಿಂದ್ರಾ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷರಾದ ಜಗಮೋಹನ್ ದಾಲ್ಮಿಯಾ ಮತ್ತು ಎನ್.ಕೆ.ಪಿ. ಸಾಳ್ವೆಗೆ ಸಲ್ಲುತ್ತದೆ.
ಕ್ರಿಕೆಟ್ ಪಂದ್ಯಗಳ ಪ್ರಸಾರದಲ್ಲಿ ದೂರದರ್ಶನದ ಏಕಸ್ವಾಮ್ಯವನ್ನು ಮುರಿಯಲು ಬಿಂದ್ರಾ ಅವರು 1994ರಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯವು ಬಿಂದ್ರಾ ಹಾಗೂ ಅವರ ತಂಡದ ಪರ ತೀರ್ಪು ನೀಡಿತ್ತು. ಹೀಗಾಗಿ ಇಎಸ್ಪಿಎನ್ ಹಾಗೂ ಟಿಟಬ್ಲ್ಯುಐ ನಂತಹ ಜಾಗತಿಕ ಕಂಪೆನಿಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದವು. ಆ ನಂತರ ಕ್ರಿಕೆಟ್ ವಿಶ್ವದ ಅತಿ ದೊಡ್ಡ ಕ್ರೀಡೆಯಾಗಿ ಬೆಳೆಯಿತು.







