ಮಹಿಳಾ ವಿಶ್ವಕಪ್ ಚಾಂಪಿಯನ್ ಭಾರತ ತಂಡಕ್ಕೆ 51 ಕೋಟಿ ರೂ. ಬಹುಮಾನ ಘೋಷಿಸಿದ ಬಿಸಿಸಿಐ

Credit: PTI Photo
ನವಿ ಮುಂಬೈ, ನ.3: ದಕ್ಷಿಣ ಆಫ್ರಿಕಾ ವಿರುದ್ಧದ ಐತಿಹಾಸಿಕ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಜಯಭೇರಿ ಬಾರಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಭಾರೀ ಬಹುಮಾನ ಘೋಷಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, “ಮಹಿಳಾ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯ ತಂಡ ಹಾಗೂ ಅದರ ಸಿಬ್ಬಂದಿಗೆ ಒಟ್ಟು ರೂ.51 ಕೋಟಿ ಬಹುಮಾನ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್ಗಳಿಂದ ಮಣಿಸಿ ವಿಶ್ವ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ಭಾರತೀಯ ಆಟಗಾರ್ತಿಯರು ಆಲ್ರೌಂಡ್ ಪ್ರದರ್ಶನದೊಂದಿಗೆ ಎದುರಾಳಿ ತಂಡವನ್ನು ಮಣಿಸಿದರು.
ಫೈನಲ್ ನಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮಿಂಚಿದ ಶಫಾಲಿ ವರ್ಮಾ ತಾರೆಯಾಗಿ ಹೊರಹೊಮ್ಮಿದರು. ಪ್ರತೀಕಾ ರಾವಲ್ ಬದಲಿಗೆ ತಡವಾಗಿ ತಂಡಕ್ಕೆ ಸೇರಿದ ಶಫಾಲಿ 87 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದು, ಬೌಲಿಂಗ್ ವೇಳೆ ಸುನೆ ಲೂಸ್ ಮತ್ತು ಮರಿಜಾನ್ನೆ ಕಪ್ ಅವರ ವಿಕೆಟ್ಗಳನ್ನು ಪಡೆದು ಪಂದ್ಯದ ಗತಿಯನ್ನು ಭಾರತ ಪರವಾಗಿ ತಿರುಗಿಸಿದರು.
ಇದೇ ವೇಳೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇತ್ತೀಚೆಗೆ ಮಹಿಳಾ ಕ್ರಿಕೆಟ್ ಬಹುಮಾನದ ಮೊತ್ತವನ್ನು ಶೇ.300 ರಷ್ಟು ಹೆಚ್ಚಿಸಿ, 3.88 ಮಿಲಿಯನ್ ಡಾಲರ್ನಿಂದ 14 ಮಿಲಿಯನ್ ಡಾಲರ್ ಗಳಿಗೆ ಏರಿಕೆ ಮಾಡಿದೆ. ಇದರ ಹಿನ್ನೆಲೆಯಲ್ಲಿ ಬಿಸಿಸಿಐ ಭಾರತೀಯ ಮಹಿಳಾ ತಂಡದ ಆಟಗಾರ್ತಿಯರು, ತರಬೇತುದಾರರು, ಆಯ್ಕೆದಾರರು ಹಾಗೂ ಸಹಾಯಕ ಸಿಬ್ಬಂದಿಗೆ ಒಟ್ಟಾರೆ ರೂ.51 ಕೋಟಿ ಬಹುಮಾನ ನೀಡಲು ತೀರ್ಮಾನಿಸಿದೆ ಎಂದು ದೇವಜಿತ್ ಸೈಕಿಯಾ ANI ಗೆ ತಿಳಿಸಿದ್ದಾರೆ.







