IPL 2026: ಮುಸ್ತಫಿಝುರ್ ರೆಹ್ಮಾನ್ ರನ್ನು ಬಿಡುಗಡೆ ಮಾಡುವಂತೆ ಕೆಕೆಆರ್ಗೆ ಸೂಚಿಸಿದ BCCI

ಮುಸ್ತಾಫಿಝುರ್ ರೆಹಮಾನ್ (Photo: PTI)
ಗುವಾಹಟಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಗೆ ಮುನ್ನ ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ ರೆಹ್ಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಬಿಸಿಸಿಐ ಸೂಚಿಸಿದೆ.
ಕಳೆದ ತಿಂಗಳು ನಡೆದ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದಿಲ್ಲಿ ಕ್ಯಾಪಿಟಲ್ಸ್ ನಡುವಿನ ತೀವ್ರ ಬಿಡ್ಡಿಂಗ್ ಬಳಿಕ, ಕೆಕೆಆರ್ 30 ವರ್ಷದ ಎಡಗೈ ವೇಗಿಯನ್ನು 2 ಕೋಟಿ ರೂ. ಮೂಲ ಬೆಲೆಯಿಂದ 9.20 ಕೋಟಿ ರೂ.ಗೆ ಪಡೆದುಕೊಂಡಿತ್ತು.
ಅಗತ್ಯವಿದ್ದರೆ ಕೆಕೆಆರ್ ಬದಲಿ ಆಟಗಾರನನ್ನು ಹೆಸರಿಸಬಹುದೆಂದು ಬಿಸಿಸಿಐ ತಿಳಿಸಿದ್ದು, ವಿನಂತಿಯ ಮೇರೆಗೆ ಆ ಬದಲಾವಣೆಗೆ ಅನುಮತಿ ನೀಡಲಾಗುವುದೆಂದು ಸ್ಪಷ್ಟಪಡಿಸಿದೆ.
“ಬಿಸಿಸಿಐ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಮುಸ್ತಫಿಝುರ್ ರೆಹ್ಮಾನ್ ಅವರನ್ನು ಬಿಡುಗಡೆ ಮಾಡುವಂತೆ ಕೇಳಿದೆ. ಅಗತ್ಯವಿದ್ದರೆ ಬದಲಿ ಆಟಗಾರನಿಗಾಗಿ ಅವರು ಮನವಿ ಸಲ್ಲಿಸಬಹುದು. ಆ ಮನವಿಗೆ ಬಿಸಿಸಿಐ ಅನುಮತಿ ನೀಡಲಿದೆ,” ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಶನಿವಾರ ಪಿಟಿಐಗೆ ತಿಳಿಸಿದ್ದಾರೆ.
ಕೆಕೆಆರ್ನಿಂದ ಮುಸ್ತಫಿಝುರ್ ಅವರನ್ನು ಬಿಡುಗಡೆ ಮಾಡುವಂತೆ ಏಕೆ ಸೂಚನೆ ನೀಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ” ಎಂದು ಉತ್ತರಿಸಿದರು.
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬರ ಹತ್ಯೆ ನಡೆದಿರುವುದು ಹಾಗೂ ಅಲ್ಲಿನ ಅಲ್ಪಸಂಖ್ಯಾತರ ಸುರಕ್ಷತೆ ಕುರಿತು ಭಾರತ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಬಾಂಗ್ಲಾದೇಶ ಕ್ರಿಕೆಟಿಗರ ಐಪಿಎಲ್ ಭಾಗವಹಿಸುವಿಕೆ ಕುರಿತು ಬಿಸಿಸಿಐ ಮೇಲೆ ಒತ್ತಡ ಹೆಚ್ಚಾಗಿತ್ತು.







