ಏಷ್ಯಾಕಪ್- 2025: ಭಾರತ-ಪಾಕ್ ನಡುವಿನ ಪಂದ್ಯವನ್ನು ಸಮರ್ಥಿಸಿಕೊಂಡ ಬಿಸಿಸಿಐ

ಭಾರತ–ಪಾಕಿಸ್ತಾನ ಪಂದ್ಯ ವಿರೋಧಿಸಿ ಪ್ರತಿಭಟನೆ (Photo: PTI)
ಹೊಸದಿಲ್ಲಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್- 2025 ಪಂದ್ಯವನ್ನು ಬಿಸಿಸಿಐ ಸಮರ್ಥಿಸಿಕೊಂಡಿದೆ. ನಾವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಬಹಿಷ್ಕರಿಸುವುದು ಅಸಾಧ್ಯ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
“ಏಷ್ಯಾ ಕಪ್ ಅಂತಾರಾಷ್ಟ್ರೀಯ ಪಂದ್ಯವಾಗಿರುವುದರಿಂದ ನಾವು ಅದರಲ್ಲಿ ಭಾಗವಹಿಸಲು ನಿರ್ಧರಿಸಿದ್ದೇವೆ. ಇದು ಒಲಿಂಪಿಕ್ಸ್, ಫಿಫಾ ಟೂರ್ನಮೆಂಟ್, ಎಎಫ್ಸಿ ಟೂರ್ನಮೆಂಟ್ ಅಥವಾ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಟೂರ್ನಮೆಂಟ್ನಂತಯೇ ಇರುತ್ತದೆ.
ಆದ್ದರಿಂದ ನಾವು ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಬಹಿಷ್ಕರಿಸುವುದು ಅಸಾಧ್ಯ. ನಾವು ಈ ಪಂದ್ಯಾವಳಿಯನ್ನು ಬಹಿಷ್ಕರಿಸಿದರೆ ದೇಶದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಆಯೋಜಿಸುವ ನಮ್ಮ ಎಲ್ಲಾ ಭವಿಷ್ಯದ ಪ್ರಯತ್ನಗಳಿಗೆ ಅದು ಬಹಳಷ್ಟು ನಕಾರಾತ್ಮಕ ಪರಿಣಾಮ ಬೀರುತ್ತದೆ" ಎಂದು ಹೇಳಿದ್ದಾರೆ.
ಇದು ಅಂತಾರಾಷ್ಟ್ರೀಯ ಸ್ಪರ್ಧೆಯಾಗಿರುವುದರಿಂದ ನಾವು ಭಾಗವಹಿಸುತ್ತಿದ್ದೇವೆ. ಏಕೆಂದರೆ ಆಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಮಗೆ ನೇರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ದೇವಜಿತ್ ಸೈಕಿಯಾ ಹೇಳಿದರು.
"ಎರಡು ದೇಶಗಳ ನಡುವಿನ ಪಂದ್ಯಕ್ಕೆ ಸಂಬಂಧಿಸಿದಂತೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು ಸುಲಭ. ಆದರೆ ಹಲವು ದೇಶಗಳ ನಡುವಿನ ಪಂದ್ಯವಾದಾಗ ವಿಷಯಗಳು ಜಟಿಲವಾಗುತ್ತವೆ. ಇದು ಎರಡು ದೇಶಗಳ ನಡುವಿನ ಪಂದ್ಯಾವಳಿಯಾಗಿದ್ದರೆ, ಯಾವುದೇ ದೇಶದ ವಿರುದ್ಧ ಆಡುವುದಿಲ್ಲ ಎಂದು ಹೇಳಬಹುದಿತ್ತು" ಎಂದು ದೇವಜಿತ್ ಸೈಕಿಯಾ ಹೇಳಿದ್ದಾರೆ.
ರವಿವಾರ ದುಬೈಯಲ್ಲಿ ನಡೆಯುವ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಇದರಿಂದಾಗಿ ಭಾರತ–ಪಾಕಿಸ್ತಾನ ಪಂದ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿವೆ. ಪಾಕ್ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆ ಹಲವರು ಕರೆ ನೀಡಿದ್ದಾರೆ. ಒಂದು ವೇಳೆ ಪಂದ್ಯ ಆಯೋಜನೆಯಾದರೆ ಯಾರೂ ಕೂಡಾ ವೀಕ್ಷಿಸಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಲಾಗಿದೆ.







