ಭಾರತದಿಂದ ಟಿ-20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಆಗ್ರಹ; ಬಿಸಿಸಿಐ ಹೇಳಿದ್ದೇನು?

Photo source: X
ಹೊಸದಿಲ್ಲಿ: ಭಾರತದಲ್ಲಿ ನಡೆಯಲಿರುವ ತನ್ನ ಟಿ-20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು (ICC) ಆಗ್ರಹಿಸಿರುವ ಬಾಂಗ್ಲಾದೇಶದ ಕುರಿತು ಕೊನೆಗೂ ಮೌನ ಮುರಿದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಇದು ನನ್ನ ವ್ಯಾಪ್ತಿಯಲ್ಲಿಲ್ಲ ಎಂದು ಪ್ರತಿಕ್ರಿಯಿಸಿದೆ.
ಇತ್ತೀಚಿನ ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಆಟಗಾರ ಮುಸ್ತಫಿಝುರ್ ರಹ್ಮಾನ್ ರನ್ನು ತಂಡದಿಂದ ಕೈಬಿಡುವಂತೆ IPL ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಗೆ BCCI ಸೂಚಿಸಿದ ಹಿನ್ನೆಲೆಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಉದ್ವಿಗ್ನತೆ ಮತ್ತಷ್ಟು ಬಿಗಡಾಯಿಸಿದೆ.
ಮುಸ್ತಫಿಝುರ್ ರಹ್ಮಾನ್ ರನ್ನು ತಂಡಕ್ಕೆ ಸೇರಿಸಿಕೊಂಡ ನಡೆಯ ಕುರಿತು ಕೋಲ್ಕತ್ತಾ ನೈಟ್ ರೈಡರ್ಸ್ ಟೀಕೆಗೆ ಗುರಿಯಾಗಿತ್ತು. ನಂತರ ಮುಸ್ತಫಿಝುರ್ ರಹ್ಮಾನ್ ರನ್ನು ತಂಡದಿಂದ ಬಿಡುಗಡೆಗೊಳಿಸುವಂತೆ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ BCCI ಸೂಚಿಸಿದೆ. ಅಬುಧಾಬಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬಾಂಗ್ಲಾ ವೇಗಿ ಮುಸ್ತಫಿಝುರ್ ರಹ್ಮಾನ್ ರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 9.2 ಕೋಟಿ ರೂ. ಮೊತ್ತ ತೆತ್ತು ಖರೀದಿಸಿತ್ತು.
ಮುಸ್ತಫಿಝುರ್ ರಹ್ಮಾನ್ ರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಬಿಡುಗಡೆಗೊಳಿಸಿರುವ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹಾಗೂ ಬಾಂಗ್ಲಾದೇಶ ಸರಕಾರ, ಭದ್ರತಾ ಕಳವಳದ ಕಾರಣಕ್ಕೆ ಭಾರತದಲ್ಲಿ ನಿಗದಿಯಾಗಿರುವ ತನ್ನ ಟಿ-20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದವು.
ಈ ಕುರಿತು ಬಾಂಗ್ಲಾದೇಶ ಸರಕಾರ ಹಾಗೂ ಬಾಂಗ್ಲಾ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯೊಂದಿಗೆ ಇಮೇಲ್ ವಿನಿಮಯವನ್ನು ಮುಂದುವರಿಸಿದ್ದರೂ, ಇದುವರೆಗೆ ಈ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ.







