ರೋಹಿತ್,ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಭವಿಷ್ಯ ನಿರ್ಧರಿಸಲು ಬಿಸಿಸಿಐ ನಿರ್ಣಾಯಕ ಸಭೆ

ವಿರಾಟ್ ಕೊಹ್ಲಿ , ರೋಹಿತ್ ಶರ್ಮಾ | PC : PTI
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿ ಕೊನೆಗೊಂಡ ನಂತರ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಏಕದಿನ ಕ್ರಿಕೆಟ್ ಭವಿಷ್ಯದ ನಿರ್ಧರಿಸಲು ಆಯ್ಕೆಗಾರರು ಹಾಗೂ ಟೀಮ್ ಮ್ಯಾನೇಜ್ಮೆಂಟ್ ನಡುವೆ ಸಭೆ ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.
ಮುಂದಿನ ವಾರ ವಿಶಾಖಪಟ್ಟಣದಲ್ಲಿ ಮೂರನೇ ಏಕದಿನ ಪಂದ್ಯ ಕೊನೆಗೊಂಡ ನಂತರ ಬಿಸಿಸಿಐನ ಉನ್ನತ ಅಧಿಕಾರಿಗಳು, ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅಹ್ಮದಾಬಾದ್ನಲ್ಲಿ ಒಟ್ಟಿಗೆ ಕುಳಿತುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮುಂದಿನ ಏಕದಿನ ವಿಶ್ವಕಪ್ಗೆ ತಂಡದ ಸಿದ್ಧತೆಯ ಕುರಿತು ರೋಹಿತ್ ಹಾಗೂ ವಿರಾಟ್ ಇನ್ನೂ ಸರಿಯಾದ ಚರ್ಚೆ ನಡೆಸಿಲ್ಲ. ಒಂದು ವೇಳೆ ಇಬ್ಬರಲ್ಲಿ ಯಾರಾದರೂ ಒಬ್ಬರಿಗೆ ವಿಶ್ವಕಪ್ನಲ್ಲಿ ಆಡಲು ಸಾಧ್ಯವಾಗದಿದ್ದರೆ, ತಂಡದ ಮೀಸಲು ಆಟಗಾರರನ್ನು ಗುರುತಿಸುವ ಕೆಲಸ ತಂಡದ ಆಡಳಿತ ಮಂಡಳಿ ಮಾಡಲಿದೆ ಎಂದು ತಿಳಿದುಬಂದಿದೆ.
ತಮ್ಮ ಫಿಟ್ನೆಸ್ ಹಾಗೂ ಪ್ರದರ್ಶನದತ್ತ ಗಮನ ನೀಡಿ, ತಮ್ಮ ಕ್ರಿಕೆಟ್ ಭವಿಷ್ಯದ ಕುರಿತ ಊಹಾಪೋಹಕ್ಕೆ ಪ್ರತಿಕ್ರಿಯಿಸಬೇಡಿ ಎಂದು ರೋಹಿತ್ಗೆ ಬಿಸಿಸಿಐ ಕಿವಿ ಮಾತು ಹೇಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.







