IPL 2025 | ಮುಂಬೈ - ಹೈದರಾಬಾದ್ ಪಂದ್ಯದ ವೇಳೆ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಟ, ಪಟಾಕಿ ಪ್ರದರ್ಶನವಿಲ್ಲ
ಪಹಲ್ಗಾಮ್ ನಲ್ಲಿ ಮಡಿದವರಿಗೆ ಕಂಬನಿ

ಸಾಂದರ್ಭಿಕ ಚಿತ್ರ (PTI)
ಹೈದರಾಬಾದ್: ಇಂದು ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆತಿಥೇಯ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆಯಲಿರುವ ಪಂದ್ಯಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಿನ್ನೆ (ಮಂಗಳವಾರ) ನಡೆದ ಭಯೋತ್ಪಾದಕ ದಾಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸಂತಾಪ ಸೂಚಿಸಲಿದೆ. ಇದರ ಭಾಗವಾಗಿ ಪಂದ್ಯದ ಆರಂಭಕ್ಕೂ ಮುನ್ನ ಒಂದು ನಿಮಿಷ ಮೌನಾಚರಣೆ ನಡೆಯಲಿದ್ದು, ಉಭಯ ತಂಡಗಳ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿಯಲಿದ್ದಾರೆ. ಅಲ್ಲದೆ, ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಯಾವುದೇ ಬಗೆಯ ಪಟಾಕಿಗಳ ಸಿಡಿಸುವುದನ್ನು ಕೈಬಿಡಲಾಗಿದೆ.
ಈ ನಡುವೆ, ನಿನ್ನೆ (ಮಂಗಳವಾರ) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಅಮಾನುಷ ಭಯೋತ್ಪಾದಕ ದಾಳಿಯನ್ನು ಹಲವು ಕ್ರಿಕೆಟಿಗರು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭಾರತ ತಂಡದ ಮಾಜಿ ಆಟಗಾರ ಆರ್.ಪಿ.ಸಿಂಗ್, “ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ತೀವ್ರ ದುಃಖಿತನಾಗಿದ್ದೇನೆ. ಸಂತ್ರಸ್ತರ ಕುಟುಂಬಗಳ ಸದಸ್ಯರಿಗೆ ನನ್ನ ಸಂತಾಪಗಳು. ಈ ವಿವೇಚನಾರಹಿತ ಹಿಂಸೆಯನ್ನು ಖಂಡಿಸುತ್ತೇನೆ. ಈ ಕ್ಲಿಷ್ಟಕರ ಸಮಯದಲ್ಲಿ ನಾವು ಒಗ್ಗಟ್ಟು ಹಾಗೂ ನೆರವಿನಲ್ಲಿ ಬಲವನ್ನು ಕಾಣೋಣ” ಎಂದು ಕರೆ ನೀಡಿದ್ದಾರೆ.
ಈ ಕಠಿಣ ಸಮಯದಲ್ಲಿ ದೇಶ ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ಮುಖ್ಯ ತರಬೇತುದಾರ ರವಿ ಶಾಸ್ತ್ರಿ, “ಈ ಘೋರ, ಹೇಡಿತನದ ಕೃತ್ಯವು ಯಾರನ್ನೂ ಬಿಡದೆ, ಇಡೀ ದೇಶವನ್ನು ಸಂಪೂರ್ಣವಾಗಿ ಒಗ್ಗೂಡಿಸುವಂತಾಗಲಿ” ಎಂದು ಹೇಳಿದ್ದಾರೆ.
ನಿನ್ನೆ ಪಹಲ್ಗಾಮ್ ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಓರ್ವ ವಿದೇಶಿ ಪ್ರವಾಸಿಗ ಸೇರಿದಂತೆ ಒಟ್ಟು 27 ಮಂದಿ ಪ್ರವಾಸಿಗರು ದಾರುಣವಾಗಿ ಹತ್ಯೆಗೀಡಾಗಿದ್ದರು.







