ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ರಾಹುಲ್ ದ್ರಾವಿಡ್, ಮಿಥಾಲಿಗೆ ಜೀವಮಾನ ಸಾಧನೆ ಪ್ರಶಸ್ತಿ

ರೋಜರ್ ಬಿನ್ನಿ, ರಾಹುಲ್ ದ್ರಾವಿಡ್ ||Photo Credit : PTI
ಹೊಸದಿಲ್ಲಿ, ಮಾ. 14: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನಮನ್ ಪ್ರಶಸ್ತಿ ಪ್ರದಾನ ಸಮಾರಂಭ 2026 ರಾಷ್ಟ್ರ ರಾಜಧಾನಿಯಲ್ಲಿ ರವಿವಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಭಾರತೀಯ ತಂಡದ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಮತ್ತು ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ಪ್ರತಿಷ್ಠಿತ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯ ಮೂಲಕ ಗೌರವಿಸಲಾಗುವುದು.
ಭಾರತೀಯ ಕ್ರಿಕೆಟ್ಗೆ ನೀಡಿದ ಮಹತ್ವದ ದೇಣಿಗೆಗಳು, ಸೇವೆ ಮತ್ತು ಪ್ರಾಮಾಣಿಕತೆಯನ್ನು ಒಳಗೊಂಡ ಕ್ರಿಕೆಟ್ ವೃತ್ತಿ ಬದುಕಿಗಾಗಿ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು.
ಈ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅಂಶವೆಂದರೆ, ಐಸಿಸಿ ಟ್ರೋಫಿಗಳನ್ನು ಗೆದ್ದ ಎಲ್ಲಾ ಐದು ಭಾರತೀಯ ತಂಡಗಳನ್ನು ಇಲ್ಲಿ ಗೌರವಿಸಲಾಗುವುದು. 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು 2026ರಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆದ್ದ ಭಾರತೀಯ ಪುರುಷರ ತಂಡ, 2025ರಲ್ಲಿ ಐಸಿಸಿ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಗೆದ್ದ ಮಹಿಳಾ ತಂಡ, 2026ರಲ್ಲಿ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಪುರುಷರ ಅಂಡರ್-19 ತಂಡ ಹಾಗೂ 2025ರಲ್ಲಿ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಮಹಿಳಾ ಅಂಡರ್-19 ತಂಡಗಳನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.
‘‘ಈ ವರ್ಷದ ಕಾರ್ಯಕ್ರಮದಲ್ಲಿ, ರೋಜರ್ ಬಿನ್ನಿ ಮತ್ತು ರಾಹುಲ್ ದ್ರಾವಿಡ್ರನ್ನು ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯಿಂದ ಗೌರವಿಸಲಾಗುವುದು. ಇದು ಭಾರತೀಯ ಕ್ರಿಕೆಟ್ಗೆ ಸಲ್ಲಿಸಿರುವ ಮಹೋನ್ನತ ಸೇವೆಗಾಗಿ ನೀಡುವ ಬಿಸಿಸಿಐಯ ಅತ್ಯುನ್ನತ ಗೌರವವಾಗಿದೆ’’ ಎಂದು ಬಿಸಿಸಿಐ ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಭಾರತದಲ್ಲಿ ಮಹಿಳಾ ಕ್ರಿಕೆಟ್ನ ಬೆಳವಣಿಗೆಗೆ ನೀಡಿರುವ ಅಸಾಧಾರಣ ದೇಣಿಗೆಯನ್ನು ಗುರುತಿಸಿ ಮಿಥಾಲಿ ರಾಜ್ರನ್ನು ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿಯಿಂದ ಗೌರವಿಸಲಾಗುವುದು’’ ಎಂದು ಹೇಳಿಕೆ ತಿಳಿಸಿದೆ.
ರೋಜರ್ ಬಿನ್ನಿ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ. ಅವರು ದಶಕಗಳ ಕಾಲ ಆಟಗಾರ, ಮಾರ್ಗದರ್ಶಿ ಮತ್ತು ಆಡಳಿತಗಾರನಾಗಿ ಭಾರತೀಯ ಕ್ರಿಕೆಟ್ಗೆ ದೇಣಿಗೆ ನೀಡಿದ್ದಾರೆ.
ಕ್ರಿಕೆಟ್ ಕಂಡ ಅತ್ಯಂತ ಪ್ರತಿಭಾನ್ವಿತ ಬ್ಯಾಟರ್ಗಳ ಪೈಕಿ ಒಬ್ಬರಾಗಿ ಹಾಗೂ ಭಾರತ ಹೊಸ ಹಾದಿ ಹುಡುಕುವಂತೆ ಮಾಡಿದ ಕೋಚ್ ಆಗಿ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ಗೆ ಅಸಾಧಾರಣ ದೇಣಿಗೆ ನೀಡಿದ್ದಾರೆ. ಅವರು 24,000ಕ್ಕೂ ಅಧಿಕ ಅಂತರ್ರಾಷ್ಟ್ರೀಯ ರನ್ಗಳನ್ನು ಗಳಿಸಿದ್ದಾರೆ.
ಮಿಥಾಲಿ ರಾಜ್ ಇಪ್ಪತ್ತು ವರ್ಷಗಳಿಗೂ ಹೆಚ್ಚಿನ ವೃತ್ತಿ ಜೀವನದಲ್ಲಿ ತನ್ನ ವಿಶ್ವಸನೀಯತೆ, ಲಾಲಿತ್ಯ ಮತ್ತು ನಾಯಕತ್ವದ ಮೂಲಕ ಪ್ರಬುದ್ಧ ಭಾರತೀಯ ಮಹಿಳಾ ಕ್ರಿಕೆಟ್ ತಂಡವೊಂದರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.






