ಏಕದಿನ ಪಂದ್ಯಗಳಿಗೆ ಪರಿಗಣಿಸಬೇಕಿದ್ದರೆ ದೇಶೀಯ ಕ್ರಿಕೆಟ್ ನಲ್ಲಿ ಆಟವಾಡಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬಿಸಿಸಿಐ ತಾಕೀತು

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ (File Photo: PTI)
ಹೊಸದಿಲ್ಲಿ: ದೇಶೀಯ ಏಕದಿನ ಪಂದ್ಯಗಳ ಟೂರ್ನಿಯಾದ ವಿಜಯ್ ಹಝಾರೆ ಟ್ರೋಫಿಯ ಋತು ಸಮೀಪಿಸುತ್ತಿದ್ದು, “ನಿಮ್ಮನ್ನು ರಾಷ್ಟ್ರೀಯ ಏಕದಿನ ತಂಡಕ್ಕೆ ಪರಿಗಣಿಸಬೇಕಿದ್ದರೆ ದೇಶೀಯ ಕ್ರಿಕೆಟ್ ನಲ್ಲಿ ಆಟವಾಡಿ” ಎಂದು ಭಾರತ ತಂಡದ ತಾರಾ ಬ್ಯಾಟರ್ ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದೆ ಎಂದು Indian Express ವರದಿ ಮಾಡಿದೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈಗಾಗಲೇ ಟೆಸ್ಟ್ ಮತ್ತು ಟಿ-20 ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದು, 50 ಓವರ್ ಗಳ ಅಂತಾರಾಷ್ಟ್ರೀಯ ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಹೀಗಾಗಿ, ಅವರ ದೈಹಿಕ ಸಾಮರ್ಥ್ಯ ಚರ್ಚೆಯ ವಿಷಯವಾಗಿ ಬದಲಾಗಿದೆ. ದಕ್ಷಿಣ ಆಫ್ರಿಕಾ ಏಕದಿನ ಸರಣಿ ಪ್ರಾರಂಭಗೊಳ್ಳುವುದಕ್ಕೂ ಮುನ್ನ, ಅವರಿಬ್ಬರ ಸಾಮರ್ಥ್ಯವನ್ನು ಪರೀಕ್ಷಿಸಲು ಅವರನ್ನು ದೇಶೀಯ ಕ್ರಿಕೆಟ್ ಟೂರ್ನಿಯಾದ ವಿಜಯ್ ಹಝಾರೆ ಟ್ರೋಫಿಯಲ್ಲಿ ಆಡಿಸಬೇಕು ಎಂಬ ಚರ್ಚೆ ತೀವ್ರಗೊಂಡಿದೆ.
ನಾನು ವಿಜಯ್ ಹಝಾರೆ ಟ್ರೋಫಿಯಲ್ಲಿ ಆಡಲು ಲಭ್ಯವಿದ್ದೇನೆ ಎಂದು ಈಗಾಗಲೇ ಮುಂಬೈ ಕ್ರಿಕೆಟ್ ಒಕ್ಕೂಟಕ್ಕೆ ರೋಹಿತ್ ಶರ್ಮಾ ಮಾಹಿತಿ ನೀಡಿದ್ದಾರೆ. ಆದರೆ, ದೇಶೀಯ ಕ್ರಿಕೆಟ್ ಟೂರ್ನಿಯಾದ ವಿಜಯ್ ಹಝಾರೆ ಟ್ರೋಫಿಗೆ ತಮ್ಮ ಲಭ್ಯತೆಯ ಕುರಿತು ವಿರಾಟ್ ಕೊಹ್ಲಿ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ ಎಂದು ವರದಿಯಾಗಿದೆ.
“ಒಂದು ವೇಳೆ ರಾಷ್ಟ್ರೀಯ ತಂಡದ ಪರವಾಗಿ ನೀವು ಆಡಬೇಕಿದ್ದರೆ, ನೀವು ದೇಶೀಯ ಕ್ರಿಕೆಟ್ ನಲ್ಲಿ ಆಡಲೇಬೇಕು ಎಂದು ತಂಡದ ಆಡಳಿತ ಮಂಡಳಿಯು ಈಗಾಗಲೇ ಅವರಿಬ್ಬರಿಗೂ ಸೂಚಿಸಿದೆ. ಅವರಿಬ್ಬರೂ ಈಗಾಗಲೇ ಎರಡು ಮಾದರಿಯ ಕ್ರಿಕೆಟ್ ನಿಂದ ನಿವೃತ್ತರಾಗಿರುವುದರಿಂದ, ಅವರು ದೈಹಿಕವಾಗಿ ಸಮರ್ಥರಾಗಿರಲು ದೇಶೀಯ ಕ್ರಿಕೆಟ್ ನಲ್ಲಿ ಆಡಲೇಬೇಕಿದೆ” ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲಗಳು ತಿಳಿಸಿವೆ ಎಂದು Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದಕ್ಕೂ ಮುನ್ನ, ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಭಾರತ ತಂಡದ ಹೀನಾಯ ಪ್ರದರ್ಶನದ ಬಳಿಕ, ರಣಜಿ ಟ್ರೋಫಿಗೆ ಮರಳುವಂತೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸೂಚಿಸಿತ್ತು. ಅದರಂತೆ, ಈ ಇಬ್ಬರೂ ಆಟಗಾರರು ತಲಾ ಒಂದೊಂದು ರಣಜಿ ಪಂದ್ಯದಲ್ಲಿ ಆಡಿದ್ದರು.







