ಶ್ರೀಲಂಕಾ ಆಟಗಾರನಿಗೆ ತಳ್ಳಿದ ವೈಭವ ಸೂರ್ಯವಂಶಿ ವಿರುದ್ಧ ಐಸಿಸಿ ಕ್ರಮ?

Photo Credit : NDTV
ಹೊಸದಿಲ್ಲಿ, ಜೂ.16: ಭಾರತದ ಯುವ ಬ್ಯಾಟಿಂಗ್ ಸ್ಟಾರ್ ವೈಭವ್ ಸೂರ್ಯವಂಶಿ ತ್ರಿಕೋನ ಸರಣಿಯ ಸೂಪರ್ ಓವರ್ ಪಂದ್ಯದ ವೇಳೆ ಶ್ರೀಲಂಕಾದ ಆಟಗಾರನೊಬ್ಬನನ್ನು ತಳ್ಳಿದ ಘಟನೆಗೆ ಸಂಬಂಧಿಸಿ ಐಸಿಸಿಯಿಂದ ಕ್ರಮ ಎದುರಿಸುವ ಸಾಧ್ಯತೆಯಿದೆ.
15ರ ವಯಸ್ಸಿನ ಸೂರ್ಯವಂಶಿ ಭಾರತದ ಉಜ್ವಲ ಯುವ ಆಟಗಾರನಾಗಿ ಹೊರಹೊಮ್ಮಿದ್ದು, ಸೋಮವಾರ ಡಾಂಬುಲ್ಲಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು ಸೂಪರ್ ಓವರ್ನಲ್ಲಿ ಗೆಲುವು ದಾಖಲಿಸಿದ ಸಂಭ್ರಮದಲ್ಲಿದ್ದಾಗ ಲಂಕಾ ಆಟಗಾರರೊಂದಿಗೆ ಸೂರ್ಯವಂಶಿ ವಾಗ್ವಾದ ನಡೆಸಿ ಆಟಗಾರನೊಬ್ಬನನ್ನು ತಳ್ಳಿದ್ದರು.
ಘಟನೆಗೆ ಸಂಬಂಧಿಸಿ ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಕಾಶ್ ಶಿಕ್ಷೆ ವಿಧಿಸುವರೇ?, ಇಂತಹ ಪ್ರಕರಣದಲ್ಲಿ ಐಸಿಸಿ ನೀತಿ ಸಂಹಿತೆ ಏನು ಹೇಳುತ್ತದೆ ಎಂಬ ಪ್ರಶ್ನೆಗಳು ಉದ್ಬವಿಸಿದೆ.
ಸೂಪರ್ ಓವರ್ನಲ್ಲಿ ಜಯ ಸಾಧಿಸಿದ ಶ್ರೀಲಂಕಾ ಆಟಗಾರರು ಸಂಭ್ರಮಾಚರಣೆ ನಡೆಸಿದರು. ನಿರಾಶೆಗೊಂಡಿದ್ದ ಸೂರ್ಯವಂಶಿ ತನ್ನ ಸಹ ಆಟಗಾರ ಸೂರ್ಯಾಂಶ್ ಜೊತೆ ಪೆವಿಲಿಯನ್ನತ್ತ ಸಾಗಿದರು. ಸೂರ್ಯವಂಶಿ ಏಕಾಏಕಿ ಸೂಪರ್ ಓವರ್ನಲ್ಲಿ ಬೌಲಿಂಗ್ ಮಾಡಿದ್ದ ಲಂಕಾ ಆಟಗಾರ ಮಥುಲನ್ ಜೊತೆ ವಾಗ್ವಾದಕ್ಕಿಳಿದರು. ಜಗಳ ತಡೆಯಲು ಬಂದ ವಿಶೇನ್ ಹಲಂಬಗೆ ಅವರನ್ನು ಸೂರ್ಯವಂಶಿ ತಳ್ಳಿದರು. ಹಿರಿಯ ಆಟಗಾರ ನಿರೊಶನ್ ಡಿಕ್ವೆಲ್ಲ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ಘಟನೆಯು ಐಸಿಸಿ ನೀತಿ ಸಂಹಿತೆ 2.12ರ ಉಲ್ಲಂಘನೆಯಾಗಿದೆ. ಇದು ಲೆವೆಲ್-1 ಅಪರಾಧವಾಗಿದ್ದು, ಆಟಗಾರರ ಪಂದ್ಯಶುಲ್ಕದಲ್ಲಿ ಶೇ.50ರಷ್ಟು ದಂಡ ಪಾವತಿಸಬೇಕಾಗುತ್ತದೆ. ಆಟಗಾರನ ಶಿಸ್ತಿನ ದಾಖಲೆಗೆ ಒಂದು ಅಥವಾ ಎರಡು ಡಿಮೆರಿಟ್ ಪಾಯಿಂಟ್ಸ್ ಜಮೆಯಾಗಲಿದೆ.
ಮ್ಯಾಚ್ ರೆಫರಿ ಪ್ರದೀಪ್ ಶಿಕ್ಷೆ ವಿಧಿಸುತ್ತಾರೋ, ಅಥವಾ ಎಚ್ಚರಿಕೆ ನೀಡಿ ವಿಷಯವನ್ನುಇತ್ಯರ್ಥಪಡಿಸುತ್ತಾರೋ ಎಂದು ಸ್ಪಷ್ಟವಾಗಿಲ್ಲ.






