ಬೆಲ್ಜಿಯಮ್ ವಿರುದ್ಧ ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡಕ್ಕೆ ಸತತ 2ನೇ ಗೆಲುವು

PC : hockeywrldnws.com
ಚೆನ್ನೈ: ಯುರೋಪ್ ಪ್ರವಾಸದಲ್ಲಿರುವ ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡ ತನ್ನ ವಿಜಯದ ಸರಣಿಯನ್ನು ವಿಸ್ತರಿಸಿದೆ. ಅದು ಮಂಗಳವಾರ ಬೆಲ್ಜಿಯಮ್ನ ಆ್ಯಂಟ್ವರ್ಪ್ನ ವಿಲ್ರಿಕ್ಸ್ನಲ್ಲಿರುವ ಹಾಕಿ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡವನ್ನು 2-1 ಗೋಲಿನಿಂದ ಸೋಲಿಸಿದೆ.
ಭಾರತದ ಪರವಾಗಿ ಲಾಲ್ತಂಟ್ಲುವಾಂಗಿ 35ನೇ ನಿಮಿಷದಲ್ಲಿ ಮತ್ತು ಗೀತಾ ಯಾದವ್ 50ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು. ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಉಭಯ ತಂಡಗಳು ತೀವ್ರ ಸ್ಪರ್ಧೆ ನೀಡಿದವು. ಮೊದಲ ಗೋಲನ್ನು ಭಾರತದ ಲಾಲ್ತಂಟ್ಲುವಾಂಗಿ 35ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದರು.
48ನೇ ನಿಮಿಷದಲ್ಲಿ ಬೆಲ್ಜಿಯಮ್ನ ವಾನ್ ಹೆಲ್ಮೋಂಟರ್ ಗೋಲು ಬಾರಿಸಿದಾಗ ಅಂಕ ಪಟ್ಟಿ ಸಮಬಲಗೊಂಡಿತು. ಆದರೆ, ಎರಡು ನಿಮಿಷಗಳ ಬಳಿಕ ಗೋಲು ಬಾರಿಸುವ ಮೂಲಕ ಗೀತಾ ಯಾದವ್ ತನ್ನ ತಂಡಕ್ಕೆ ಮುನ್ನಡೆ ಒದಗಿಸಿದರು.
ಕೊನೆಯ 10 ನಿಮಿಷಗಳಲ್ಲಿ ಈ ಮುನ್ನಡೆಯನ್ನು ಕಾಪಾಡಿಕೊಳ್ಳುವಲ್ಲಿ ಭಾರತ ತಂಡ ಯಶಸ್ವಿಯಾಯಿತು.
ಈಗಾಗಲೇ ಎರಡು ವಿಜಯಗಳನ್ನು ದಾಖಲಿಸಿರುವ ಭಾರತ ತಂಡ ಗುರುವಾರ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಮತ್ತೊಮ್ಮೆ ಬೆಲ್ಜಿಯಮ್ ತಂಡವನ್ನು ಎದುರಿಸಲಿದೆ.





