ಟೀಮ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿದ ಬೆನ್ ಸ್ಟೋಕ್ಸ್!

ಬೆನ್ ಸ್ಟೋಕ್ಸ್ | Photo :X.com /@adikukalyekar
ಮ್ಯಾಂಚೆಸ್ಟರ್: ಓಲ್ಡ್ ಟ್ರಾಫೋರ್ಡ್ನಲ್ಲಿ ಬುಧವಾರ ಆರಂಭವಾಗಲಿರುವ 4ನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು ಟೀಮ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿದ್ದು, ಮೈದಾನದೊಳಗಿನ ಮಾತಿನ ಚಕಮಕಿಯಿಂದ ನನ್ನ ತಂಡ ದೂರ ಸರಿಯುವುದಿಲ್ಲ ಎಂದು ಸುಳಿವು ನೀಡಿದ್ದಾರೆ.
ಪಂದ್ಯದ ಮುನ್ನಾದಿನ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟೋಕ್ಸ್, ‘‘ಇದು ದೊಡ್ಡ ಸರಣಿಯಾಗಿದ್ದು, ಎದುರಾಳಿ ತಂಡಕ್ಕೆ ಬಿಸಿ ಮುಟ್ಟಿಸಲಾಗುವುದು. ನಾವು ಉದ್ದೇಶಪೂರ್ವಕವಾಗಿಯೇ ಏನನ್ನೂ ಮಾಡುವುದಿಲ್ಲ, ಆದರೆ ನಮ್ಮ ಹೆಜ್ಜೆಯನ್ನು ಹಿಂದಿಡಲಾರೆವು’’ ಎಂದರು.
ಇಂಗ್ಲೆಂಡ್ ತಂಡವು ಸದ್ಯ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆಯಲ್ಲಿದ್ದು, ಸರಣಿಯಲ್ಲಿ ಈಗಾಗಲೇ ಉಭಯ ತಂಡಗಳ ನಡುವೆ ಮಾತಿನ ಸಂಘರ್ಷ ನಡೆದಿದೆ. ತನ್ನ ತಂಡವು ಎಲ್ಲದ್ದಕ್ಕೂ ಸಿದ್ಧವಾಗಿದೆ ಎಂದು ಸ್ಟೋಕ್ಸ್ ಸ್ಪಷ್ಟಪಡಿಸಿದ್ದಾರೆ.
‘‘ನಾವು ಲಾರ್ಡ್ಸ್ ಟೆಸ್ಟ್ ನಂತರ ದೊಡ್ಡ ವಿರಾಮ ಪಡೆದಿದ್ದೇವೆ. ರಿಫ್ರೆಶ್ ಆಗಲು ಇದು ಉತ್ತಮ ಅವಕಾಶ. ಇದು ನಮಗೆ ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಶಕ್ತಿ ನೀಡಬಹುದು. ಕ್ರಿಸ್ ವೋಕ್ಸ್ ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ’’ಎಂದು ಸ್ಟೋಕ್ಸ್ ಹೇಳಿದರು.







