ಬೆಂಗಳೂರು| ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸ್ಟ್ಯಾಂಡ್ ಉದ್ಘಾಟನೆ

ರಾಹುಲ್ ದ್ರಾವಿಡ್ , ಅನಿಲ್ ಕುಂಬ್ಳೆ | Photo Credit : X
ಬೆಂಗಳೂರು, ಎ.5: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರವಿವಾರ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ಸ್ಟ್ಯಾಂಡ್ಗಳನ್ನು ಅವರ ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಲಾಯಿತು.
ಕರ್ನಾಟಕದ ರಾಜ್ಯ ಕ್ರಿಕೆಟ್ ಸಂಸ್ಥೆಯ(ಕೆಎಸ್ಸಿಎ)ಅಧ್ಯಕ್ಷರು ಹಾಗೂ ಇಬ್ಬರು ಲೆಜೆಂಡ್ಗಳ ದೀರ್ಘಕಾಲದ ಸಹ ಆಟಗಾರ ವೆಂಕಟೇಶ್ ಪ್ರಸಾದ್ ಹಾಗೂ ಉಪಾಧ್ಯಕ್ಷ ಸುಜೀತ್ ಸೋಮ್ಸುಂದರ್ ಸಂಸ್ಥೆಯ ಇತರ ಸದಸ್ಯರುಗಳೊಂದಿಗೆ ಅಧಿಕೃತ ಅನಾವರಣ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಿದರು.
ಚಿನ್ನಸ್ವಾಮಿ ಸ್ಟೇಡಿಯಂನ ಎಂಡ್ಸ್/ಸ್ಟ್ಯಾಂಡ್ಗಳಿಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 24,177 ರನ್ ಗಳಿಸಿರುವ ದ್ರಾವಿಡ್, 956 ಅಂತರ್ರಾಷ್ಟ್ರೀಯ ವಿಕೆಟ್ಗಳನ್ನು ಗಳಿಸಿರುವ ಕುಂಬ್ಳೆ ಹಾಗೂ ಭಾರತದ ಮಾಜಿ ಮಹಿಳಾ ಕ್ರಿಕೆಟರ್ ಶಾಂತಾ ರಂಗಸ್ವಾಮಿ ಅವರ ಹೆಸರನ್ನು ಇಡಲಾಗುವುದು ಎಂದು ಫೆಬ್ರವರಿ 14ರಂದು ಕೆಎಸ್ಸಿಎ ಪ್ರಕಟಿಸಿತ್ತು.
‘‘ಇದು ನನ್ನ ಪಾಲಿಗೆ ಎರಡನೇ ಮನೆಯಿದ್ದಂತೆ, ನಮ್ಮ ಮನೆಗಳಿಗಿಂತ ಹೆಚ್ಚು ಸಮಯವನ್ನು ಇಲ್ಲೇ ಕಳೆದಿದ್ದೇವೆ. ಈ ಸ್ಥಳವು ನನಗೆ ಎಲ್ಲವನ್ನೂ ನೀಡಿದೆ. ಪ್ರತಿಷ್ಠಿತ ಮೈದಾನವು ನನ್ನ ಜೀವನಕ್ಕೆ ನೀಡಿರುವ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಸ್ಟೇಡಿಯಂನ ಸ್ಟ್ಯಾಂಡ್ಗೆ ನನ್ನ ಹೆಸರನ್ನು ಇಡಲು ನಿರ್ಧರಿಸಿರುವ ವೆಂಕಟೇಶ ಪ್ರಸಾದ್ ಹಾಗೂ ಅವರ ಸಮಿತಿಗೆ ಧನ್ಯವಾದಗಳು’’ ಎಂದು ದ್ರಾವಿಡ್ ಹೇಳಿದ್ದಾರೆ.
ದ್ರಾವಿಡ್ ಅವರ ತಾಯಿ ಪುಷ್ಪಾ ದ್ರಾವಿಡ್ ಹಾಗೂ ಸಹೋದರ ವಿಜಯ ಅವರು ಭವ್ಯ ಕ್ಷಣಕ್ಕೆ ಸಾಕ್ಷಿಯಾದರು. ಕುಂಬ್ಳೆ ಅವರ ಪತ್ನಿ ಚೇತನಾ, ಮಗ ಮಯಾಸ್ ಹಾಗೂ ಪುತ್ರಿಯರಾದ ಆರೂನಿ ಹಾಗೂ ಸ್ವಸ್ಥಿ ಕೂಡ ಈ ವೇಳೆ ಉಪಸ್ಥಿತರಿದ್ದರು.






