ಬೆಂಗಳೂರಿನಲ್ಲಿ 10ನೇ ಆವೃತ್ತಿಯ ಸಾರಿ ರನ್; 3,200ಕ್ಕೂ ಅಧಿಕ ಮಹಿಳೆಯರು ಭಾಗಿ

Photo Credit : instagram
ಬೆಂಗಳೂರು, ನ.29: ನಗರದಲ್ಲಿ ರವಿವಾರ ಆಯೋಜಿಸಲಾಗಿದ್ದ ‘ತನೇರಾ ಸೀರೆ ರನ್-2026’ (Taneira Saree Run) ಕಾರ್ಯಕ್ರಮ ನೆರವೇರಿತು. 3,200ಕ್ಕೂ ಹೆಚ್ಚು ಮಹಿಳೆಯರು ಈ ಓಟದಲ್ಲಿ ಪಾಲ್ಗೊಂಡಿದ್ದರು. ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾದ ಈ ಓಟವು ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧದ ಮುಂಭಾಗದಿಂದ ಸಾಗಿ ಮತ್ತೆ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ವಿವಿಧ ಕ್ಷೇತ್ರಗಳ ಮಹಿಳೆಯರನ್ನು ಒಂದೆಡೆ ಸೇರಿಸಿದ ಈ ಕಾರ್ಯಕ್ರಮವು ದೈಹಿಕ ಆರೋಗ್ಯದ ಮಹತ್ವದ ಜತೆಗೆ ಸೀರೆಯು ಮಹಿಳೆಯರ ಆತ್ಮವಿಶ್ವಾಸ ಮತ್ತು ಸ್ವಯಂ ಅಭಿವ್ಯಕ್ತಿಯ ಸಂಕೇತ ಎಂಬುದನ್ನು ಸಾರಿತು.
ಈ ಬಾರಿಯ ವಿಶೇಷತೆಯಾಗಿ ಸಾಮೂಹಿಕ ಸೀರೆ ಓಟದ ಜತೆಗೆ ಸ್ಪರ್ಧಾತ್ಮಕ 5 ಕಿ.ಮೀ. ಓಟದ ವಿಭಾಗವನ್ನು ಹೊಸದಾಗಿ ಪರಿಚಯಿಸಲಾಗಿದ್ದು, ಆರು ವಯೋಮಾನದ ವಿಭಾಗಗಳಲ್ಲಿ ಒಟ್ಟು 18 ವಿಜೇತರನ್ನು ಗುರುತಿಸಿ ಗೌರವಿಸಲಾಯಿತು. ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಲನದಂತಿದ್ದ ಈ ಓಟವು, ಸೀರೆಯು ಸಾಧನೆ ಮತ್ತು ಪ್ರಗತಿಗೆ ಎಂದಿಗೂ ಅಡ್ಡಿಯಲ್ಲ ಎಂಬ ಸ್ಫೂರ್ತಿದಾಯಕ ಸಂದೇಶವನ್ನು ಸಮಾಜಕ್ಕೆ ನೀಡಿತು.
ಈ ಕಾರ್ಯಕ್ರಮಕ್ಕೆ ಟೈಟನ್ ಕಂಪೆನಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಚಾವ್ಲಾ ಹಾಗೂ ಜೆಜೆ ಆ್ಯಕ್ಟಿವ್ನ ಮುಖ್ಯ ತರಬೇತುದಾರ ಪ್ರಮೋದ್ ದೇಶಪಾಂಡೆ ಅವರು ಚಾಲನೆ ನೀಡಿದರು. ತನೇರಾದ ಮುಖ್ಯ ಮಾರಾಟ ಮತ್ತು ಮಾರುಕಟ್ಟೆ ಅಧಿಕಾರಿ ಸೋಮಪ್ರಭ್ ಸಿಂಗ್ ಅವರು ಉಪಸ್ಥಿತರಿದ್ದರು.






