ವಿಪ್ರೋ ಬೆಂಗಳೂರು ಮ್ಯಾರಥಾನ್ 2025 : ಪ್ರದೀಪ್ ಸಿಂಗ್ ಚೌಧರಿ, ಅಶ್ವಿನಿ ಜಾಧವ್ ಗೆ ಅಗ್ರ ಸ್ಥಾನ

ಬೆಂಗಳೂರು, ಸೆ. 21: ಎನ್ ಇಬಿ ಸ್ಪೋರ್ಟ್ಸ್ ಆಯೋಜಿಸಿದ್ದ ವಿಪ್ರೋ ಬೆಂಗಳೂರು ಮ್ಯಾರಥಾನ್ ನ 12ನೇ ಆವೃತ್ತಿಯು ರವಿವಾರ ನಡೆದಿದ್ದು, ಇದರಲ್ಲಿ 35,000ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದರು.
ಇತ್ತೀಚೆಗೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದಿಂದ ಓಪನ್ ನ್ಯಾಷನಲ್ ಮ್ಯಾರಥಾನ್ ಎಂದು ಗುರುತಿಸಲ್ಪಟ್ಟ ಈ ಸ್ಪರ್ಧೆಯು ಭಾರತದ ಅತ್ಯುತ್ತಮ ಅಗ್ರಮಾನ್ಯ ಕ್ರೀಡಾಪಟುಗಳನ್ನು ಆಕರ್ಷಿಸಿತು. ಪೂರ್ಣ ಮ್ಯಾರಥಾನ್, ಹಾಫ್ ಮ್ಯಾರಥಾನ್, 10 ಕೆ ರನ್ ಹಾಗೂ ಜನಪ್ರಿಯ 5 ಕೆ ಫನ್ ರನ್ ಅನ್ನು ಒಳಗೊಂಡಿತ್ತು.
ಮುಂಜಾನೆ 3:50 ಕ್ಕೆ ಪೂರ್ಣ ಮ್ಯಾರಥಾನ್ ಗೆ ಹಸಿರು ನಿಶಾನೆ ತೋರುವುದರೊಂದಿಗೆ ದಿನ ಪ್ರಾರಂಭವಾಯಿತು. ನಂತರ ಬೆಳಗ್ಗೆ 6:15ಕ್ಕೆ ಹಾಫ್ ಮ್ಯಾರಥಾನ್, ಬೆಳಗ್ಗೆ 7.45ಕ್ಕೆ 10ಕೆ ಮತ್ತು ಅಂತಿಮವಾಗಿ ಬೆಳಗ್ಗೆ 8:30ಕ್ಕೆ 5ಕೆ ಫನ್ ರನ್ ನಡೆಯಿತು.
ಬ್ಯಾಡ್ಮಿಂಟನ್ ದಂತಕಥೆ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪುಲ್ಲೇಲ ಗೋಪಿಚಂದ್ ಅವರು ರೇಸ್ ಗೆ ಚಾಲನೆ ನೀಡಿದರು. ಎಂ.ಜಿ.ರಸ್ತೆ, ವಿಧಾನಸೌಧ ಮತ್ತು ಕಬ್ಬನ್ ಪಾರ್ಕ್ ಸೇರಿದಂತೆ ಬೆಂಗಳೂರಿನ ಪ್ರಮುಖ ಸ್ಥಳಗಳನ್ನು ದಾಟಿ ಸಾಗಿತು.
ಸ್ಪೋರ್ಟ್ಸ್ ಬ್ರ್ಯಾಂಡ್ ಪೂಮಾ ಇಂಡಿಯಾ ವಿಶೇಷವಾಗಿ ವಿನ್ಯಾಸಗೊಳಿಸಿದ ನಿಯಾನ್ ಕಿತ್ತಳೆ ಬಣ್ಣದ ರೇಸ್ ಡೇ ಟೀ ಶರ್ಟ್ ನಲ್ಲಿ ಸಾವಿರಾರು ಓಟಗಾರರು ಬೀದಿಗಿಳಿದರು.
ಪುರುಷರ ವಿಭಾಗದಲ್ಲಿ ಪ್ರದೀಪ್ ಸಿಂಗ್ ಚೌಧರಿ 2 :25:19 ಸೆಕೆಂಡುಗಳಲ್ಲಿ ಮೊದಲ ಸ್ಥಾನಿಯಾಗಿ ಗುರಿ ತಲುಪಿದರೆ, ಅಶ್ವಿನಿ ಜಾಧವ್ ಮಹಿಳೆಯರ ವಿಭಾಗದಲ್ಲಿ 03:03:59 ಸೆಕೆಂಡುಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು. ಈ ವರ್ಷ 3,500 ಕ್ಕೂ ಹೆಚ್ಚು ಓಟಗಾರರು ಪೂರ್ಣ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.
11,000ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ ಹಾಫ್ ಮ್ಯಾರಥಾನ್ ವಿಭಾಗದಲ್ಲಿ, ಅಂಕಿತ್ ಗುಪ್ತಾ ಪುರುಷರ ಓಟದಲ್ಲಿ 1:06:10 ಸಮಯದೊಂದಿಗೆ ಮೊದಲ ಸ್ಥಾನ ಪಡೆದರೆ, ದೇವಂಗಿ ಪುರ್ಕಾಯಸ್ಥ ಮಹಿಳೆಯರ ಹಾಫ್ ಮ್ಯಾರಥಾನ್ ನಲ್ಲಿ 1:29:17 ಸಮಯದೊಂದಿಗೆ ಜಯ ಗಳಿಸಿದರು.
ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಮುಖ್ ಬಿ.ಆರ್ ಮತ್ತು ರಮ್ಯಾ ಆರ್. ಕ್ರಮವಾಗಿ 39 ನಿಮಿಷ ಮತ್ತು 52 ನಿಮಿಷಗಳ ಸಮಯದೊಂದಿಗೆ 10 ಕೆ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
5K ಹೋಪ್ ರನ್ ಮತ್ತೊಮ್ಮೆ ಹೆಚ್ಚಿನ ಜನರನ್ನು ಸೆಳೆಯಿತು. ಹಿರಿಯ ನಾಗರಿಕರು, ಮಕ್ಕಳು, ಕಾರ್ಪೊರೇಟ್ ಗಳು ಮತ್ತು ಎನ್ ಜಿಒಗಳು ಸೇರಿದಂತೆ 15,000 ಕ್ಕೂ ಹೆಚ್ಚು ಓಟಗಾರರು ರೇಸ್ ನಲ್ಲಿ ಪಾಲ್ಗೊಂಡಿದ್ದರು.







