1975ರ ವಿಶ್ವಕಪ್ ವಿಜೇತ, ವೆಸ್ಟ್ಇಂಡೀಸ್ ಆಲ್ರೌಂಡರ್ ಬರ್ನಾರ್ಡ್ ಜೂಲಿಯನ್ ನಿಧನ

ಬರ್ನಾರ್ಡ್ ಜೂಲಿಯನ್ | Photo Credit : NDTV
ಗಯಾನ, ಅ.7: 1975ರಲ್ಲಿ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ವೆಸ್ಟ್ಇಂಡೀಸ್ನ ಮಾಜಿ ಆಲ್ರೌಂಡರ್ ಬರ್ನಾರ್ಡ್ ಜೂಲಿಯನ್ 75ನೇ ವಯಸ್ಸಿನಲ್ಲಿ ಉತ್ತರ ಟ್ರಿನಿಡಾಡ್ನಲ್ಲಿ ನಿಧನರಾಗಿದ್ದಾರೆ.
ಎಡಗೈ ವೇಗಿ ಹಾಗೂ ಬಲಗೈ ಬ್ಯಾಟರ್ ಆಗಿದ್ದ ಜೂಲಿಯನ್ ವೆಸ್ಟ್ಇಂಡೀಸ್ ತಂಡದ ಪರ 24 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 30.92ರ ಸರಾಸರಿಯಲ್ಲಿ 866 ರನ್ ಗಳಿಸಿದ್ದರು. 37.36ರ ಸರಾಸರಿಯಲ್ಲಿ ಒಟ್ಟು 50 ವಿಕೆಟ್ಗಳನ್ನು ಉರುಳಿಸಿದ್ದರು.
ಏಕದಿನ ಕ್ರಿಕೆಟ್ನಲ್ಲಿ 25.72ರ ಸರಾಸರಿಯಲ್ಲಿ ಒಟ್ಟು 18 ವಿಕೆಟ್ಗಳನ್ನು ಪಡೆದಿದ್ದರು.
ಮೊದಲ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿಂಡೀಸ್ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ಜೂಲಿಯನ್, ಗ್ರೂಪ್ ಹಂತದಲ್ಲಿ ಶ್ರೀಲಂಕಾ ವಿರುದ್ಧ ಹಾಗೂ ಸೆಮಿ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 4 ವಿಕೆಟ್ ಗೊಂಚಲು ಪಡೆದಿದ್ದರು. ಫೈನಲ್ನಲ್ಲಿ ಆಸ್ಟ್ರೇಲಿಯದ ವಿರುದ್ಧ 37 ಎಸೆತಗಳಲ್ಲಿ 26 ರನ್ಗಳಿಸಿದ್ದ ಜೂಲಿಯನ್ ವೆಸ್ಟ್ಇಂಡೀಸ್ ತಂಡ 17 ರನ್ ಅಂತರದಿಂದ ಗೆಲುವು ದಾಖಲಿಸಲು ನೆರವಾಗಿದ್ದರು.
ಜೂಲಿಯನ್ 1970ರಿಂದ 1977ರ ತನಕ ಇಂಗ್ಲೆಂಡ್ ಕೌಂಟಿ ಕ್ಲಬ್ ಕೆಂಟ್ ಪರ ಆಡಿದ್ದು, 336 ವಿಕೆಟ್ಗಳು ಹಾಗೂ 3,296 ರನ್ ಗಳಿಸಿದ್ದರು. ಕೌಂಟಿ ಕ್ಲಬ್ನಲ್ಲಿ ತನ್ನ 7 ವರ್ಷಗಳ ಅವಧಿಯಲ್ಲಿ 7 ಟ್ರೋಫಿಗಳನ್ನು ಗೆದ್ದಿದ್ದರು.
1982ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ರೆಬೆಲ್ ಪ್ರವಾಸಕ್ಕೆ ಸಹಿ ಹಾಕಿದ್ದಕ್ಕಾಗಿ ಜೂಲಿಯನ್ ಆಜೀವ ನಿಷೇಧಕ್ಕೆ ಒಳಗಾಗಿದ್ದರು. ಹೀಗಾಗಿ ಅವರ ಕ್ರಿಕೆಟ್ ವೃತ್ತಿಜೀವನವು ಹಠಾತ್ತನೆ ಕೊನೆಗೊಂಡಿತು.







