ಉರುಗ್ವೆಯ ಕೊಲನ್ ಫುಟ್ಬಾಲ್ ತಂಡಕ್ಕೆ ಬಿಜಯ್ ಛೇತ್ರಿ ಸೇರ್ಪಡೆ; ಪೂರ್ಣಕಾಲಿಕ ಗುತ್ತಿಗೆ ಪಡೆದ ಮೊದಲ ಭಾರತೀಯ ಫುಟ್ಬಾಲಿಗ

ಬಿಜಯ್ ಛೇತ್ರಿ | PC : X \ @ChennaiyinFC
ಹೊಸದಿಲ್ಲಿ: ಭಾರತೀಯ ಫುಟ್ಬಾಲ್ ಆಟಗಾರ ಬಿಜಯ್ ಛೇತ್ರಿ ಉರುಗ್ವೆಯ ಕ್ಲಬ್ ಕೊಲನ್ ಎಫ್ಸಿಯಲ್ಲಿ ಆಡುವುದಕ್ಕಾಗಿ ಪೂರ್ಣಕಾಲಿಕ ಗುತ್ತಿಗೆಗೆ ಸಹಿ ಹಾಕಿದ್ದಾರೆ. ಇದರೊಂದಿಗೆ ದಕ್ಷಿಣ ಅಮೆರಿಕದ ಫುಟ್ಬಾಲ್ ಕ್ಲಬ್ ಒಂದರಲ್ಲಿ ಆಡುವ ಪೂರ್ಣಕಾಲಿಕ ಗುತ್ತಿಗೆ ಪಡೆದ ಮೊದಲ ಭಾರತೀಯ ಆಟಗಾರ ಅವರಾಗಿದ್ದಾರೆ.
ಕೊಲನ್ ಫುಟ್ಬಾಲ್ ಕ್ಲಬ್ ಮೊಂಟೆವೀಡಿಯೊದಲ್ಲಿದೆ. ಅದು ಉರುಗ್ವೆಯ ಸೆಗುಂಡ ಡಿವಿಶನ್ ಪ್ರೊಫೆಶನಲ್ (ಎರಡನೇ ವಿಭಾಗ)ನಲ್ಲಿ ಸ್ಪರ್ಧಿಸುತ್ತದೆ. ಕಳೆದ ಋತುವಿನಲ್ಲಿ, ಕೊಲನ್ ಎಫ್ಸಿ ಕ್ಲಬ್ 23 ವರ್ಷದ ಬಿಜಯ್ರನ್ನು ಚೆನ್ನೈಯಿನ್ ಎಫ್ಸಿಯಿಂದ ಎರವಲು ಪಡೆದುಕೊಂಡಿತ್ತು. ಅವರು 2024 ನವೆಂಬರ್ನಲ್ಲಿ ಆ ಕ್ಲಬ್ ಪರವಾಗಿ ತನ್ನ ಚೊಚ್ಚಲ ಪಂದ್ಯವನ್ನು ಲಾ ಲುಝ್ ವಿರುದ್ಧ ಆಡಿದ್ದರು.
ಅವರು ಲ್ಯಾಟಿನ್ ಅಮೆರಿಕದಲ್ಲಿ ಆಡಿದ ಎಡನೇ ಭಾರತೀಯ ಆಗಿದ್ದಾರೆ. ಇದಕ್ಕೂ ಮೊದಲು, 2015ರಲ್ಲಿ ಭಾರತದ ರೋಮಿಯೊ ಫೆರ್ನಾಂಡಿಸ್ ಎರವಲು ಆಟಗಾರನಾಗಿ ಅಟ್ಲೆಟಿಕೊ ಪಾರನ್ಯಾನ್ಸ್ ಕ್ಲಬ್ ಪರವಾಗಿ ಆಡಿದ್ದರು.
‘‘ಕಳೆದ ವರ್ಷ ನಾನು ಚೆನ್ನೈಯಿನ್ ಎಫ್ಸಿಯಿಂದ ಎರವಲು ಆಟಗಾರನಾಗಿ ಬಂದ ದಿನದಿಂದಲೇ ಕೋಲನ್ ಎಫ್ಸಿಯ ಕೆಲವು ಅಧಿಕಾರಿಗಳು ನನ್ನ ಬೆಳವಣಿಗೆಗೆ ನೆರವು ನೀಡಿದ್ದಾರೆ. ಬಳಿಕ, ಜನವರಿಯಲ್ಲಿ ಈ ಕ್ಲಬ್ಗೆ ನನ್ನ ಪೂರ್ಣ ಪ್ರಮಾಣದ ಹಸ್ತಾಂತರ ನಡೆಯಿತು. ನನ್ನ ಬೆಳವಣಿಗೆಗೆ ಅವರು ನೀಡಿರುವ ದೇಣಿಗೆಯನ್ನು ನಾನು ವಿಶೇಷವಾಗಿ ಸ್ಮರಿಸುತ್ತೇನೆ’’ ಎಂಬುದಾಗಿ ಛೇತ್ರಿ ಸಾಮಾಜಿಕ ಮಾದ್ಯಮದಲ್ಲಿ ಬರೆದಿದ್ದಾರೆ.
ಮಣಿಪುರದ ಛೇತ್ರಿ ತನ್ನ ಫುಟ್ಬಾಲ್ ಕ್ರೀಡಾ ಜೀವನವನ್ನು 2016ರಲ್ಲಿ ಶಿಲ್ಲಾಂಗ್ ಲಜೊಂಗ್ ಕ್ಲಬ್ನೊಂದಿಗೆ ಆರಂಭಿಸಿದರು. ಬಳಿಕ 2018ರಲ್ಲಿ ಹಿರಿಯ ಆಟಗಾರನಾಗಿ ಚೊಚ್ಚಲ ಪಂದ್ಯವನ್ನು ಇಂಡಿಯನ್ ಆ್ಯರೋಸ್ನಲ್ಲಿ ಆಡಿದರು.
ಅಂದಿನಿಂದ ಅವರು ಚೆನ್ನೈ ಸಿಟಿ, ರಿಯಲ್ ಕಾಶ್ಮೀರ್ ಮತ್ತು ಶ್ರೀನಿಧಿ ಡೆಕ್ಕನ್ ಮುಂತಾದ ಕ್ಲಬ್ಗಳಲ್ಲಿ ಆಡಿದರು. ಬಳಿಕ ಅವರು ಹಾಲಿ ಋತುವಿನಲ್ಲಿ ಚೆನ್ನೈಯಿನ್ ಎಫ್ಸಿಗೆ ಸೇರ್ಪಡೆಯಾದರು.







