ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಎರಡು ಬಾರಿ ಆಟವನ್ನು ನಿಲ್ಲಿಸಿದ ಹಕ್ಕಿಗಳ ಹಿಕ್ಕಿ!

Photo Credit : Hindustan Times \ X
ಹೊಸದಿಲ್ಲಿ: ಇಲ್ಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್ ಸೂಪರ್ 750 ಬ್ಯಾಂಡ್ಮಿಂಟನ್ ಟೂರ್ನಿಯನ್ನು ಆವರಿಸಿಕೊಂಡಿರುವ ವಿವಾದವು ಮುಂದುವರಿದಿದೆ. ನಗರದ ವಾಯು ಗುಣಮಟ್ಟ,ಸುತ್ತುಮುತ್ತಲಿನ ಕೊಳಕು ಪ್ರದೇಶಗಳು, ತಾಪನ ವ್ಯವಸ್ಥೆಯ ಕೊರತೆ ಮತ್ತು ಕೋತಿಗಳ ಹಾವಳಿ ಕುರಿತು ದೂರುಗಳ ಬಳಿಕ ಗುರುವಾರ ಭಾರತದ ಎಚ್.ಎಸ್.ಪ್ರಣಯ ಮತ್ತು ಸಿಂಗಾಪುರದ ಮಾಜಿ ವಿಶ್ವ ಚಾಂಪಿಯನ್ ಲೊಹ್ ಕೀನ್ ಯೂ ಅವರ ನಡುವಿನ ಪುರುಷರ ಸಿಂಗಲ್ಸ್ ಪಂದ್ಯದ ವೇಳೆ ಅಂಗಳದಲ್ಲಿ ವಿಲಕ್ಷಣ ಹೊಸ ಹಕ್ಕಿಯ ಹಿಕ್ಕಿಗಳು ಎರಡು ಸಲ ಆಟ ಸ್ಥಗಿತಗೊಳ್ಳಲು ಕಾರಣವಾಗಿದ್ದವು.
ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ಈ ಅಡಚಣೆಗಳು ಎದುರಾಗಿದ್ದವು. ಮೊದಲ ಪಂದ್ಯದಲ್ಲಿ ಪ್ರಣಯ 16-14ರಿಂದ ಮುಂದಿದ್ದಾಗ ಮೊದಲ ಬಾರಿಗೆ ಆಟವು ಸ್ಥಗಿತಗೊಂಡಿತ್ತು. ಆಟ ನಿಲ್ಲುತ್ತಿದ್ದಂತೆ ನೆಟ್ ಬಳಿ ಸಾಗಿದ ಯೂ ಮೇಲ್ಚಾವಣಿಯತ್ತ ಕಣ್ಣು ಹಾಯಿಸಿ ವಾಂತಿಯ ಸಂಜ್ಞೆಯನ್ನು ಮಾಡಿದ್ದು,ಇದು ನೇರಪ್ರಸಾರದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು.
ಹಲವು ನಿಮಿಷಗಳ ವಿಳಂದ ಬಳಿಕ ಆಟ ಪುನರಾರಂಭಗೊಂಡಿತ್ತು. ಆದರೆ ನಿರ್ಣಾಯಕ ಮೂರನೇ ಪಂದ್ಯದಲ್ಲಿ ಅದೇ ಪ್ರಹಸನ ಪುನರಾವರ್ತನೆಯಾಗಿತ್ತು. ಈ ಸಲವೂ 1-0ದಿಂದ ಮುಂದಿದ್ದ ಪ್ರಣಯ ತನ್ನ ರ್ಯಾಕೆಟ್ನ್ನು ಮೇಲಕ್ಕೆತ್ತಿ ವಿಷಯದತ್ತ ಚೇರ್ ಅಂಪೈರ್ ಗಮನವನ್ನು ಸೆಳೆದಿದ್ದರು. ಆಟವನ್ನು ಮತ್ತೊಮ್ಮೆ ನಿಲ್ಲಿಸಲಾಗಿತ್ತು.
ಈ ಎರಡೂ ಸಂದರ್ಭಗಳಲ್ಲಿ ಟಿವಿ ಪ್ರಸಾರಕರು ಪಾರದರ್ಶಕತೆಯ ಬದಲು ಅಪಾರದರ್ಶಕತೆಯನ್ನು ಮೆರೆದಿದ್ದರು. ‘ಘಟನೆಯ’ ಬಳಿಕ ಅಂಗಳಗಳನ್ನು ಸ್ವಚ್ಛಗೊಳಿಸುತ್ತಿರುವುದನ್ನು ತೋರಿಸುವ ಬದಲು ಕ್ಯಾಮೆರಾಗಳನ್ನು ಪ್ರೇಕ್ಷಕರು ಮತ್ತು ಅಂಗಳದ ಪಕ್ಕ ಕುಳಿತಿದ್ದ ಕೋಚ್ಗಳತ್ತ ತಿರುಗಿಸಲಾಗಿತ್ತು.
ಈ ನಡುವೆ ವ್ಯಾಖ್ಯಾನಕಾರರು ಬಿಳಿ ಟೇಪ್ನ ಒಂದು ಪಟ್ಟಿಯು ಸಡಿಲಗೊಂಡಿದೆ ಮತ್ತು ಅದನ್ನು ಸರಿಪಡಿಸಲಾಗುತ್ತಿದೆ ಎಂಬ ದಾರಿ ತಪ್ಪಿಸುವ ವಿವರಣೆಗಳನ್ನು ನೀಡುವ ಮೂಲಕ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದ್ದರು. ಈ ಹೇಳಿಕೆಗಳು ಆಟಗಾರರು ಮತ್ತು ಕ್ರೀಡಾಂಗಣದ ಒಳಗಿದ್ದವರು ನೋಡಿದ್ದಕ್ಕೆ ಸಂಪೂರ್ಣ ವಿರುದ್ಧವಾಗಿತ್ತು.
ಪಂದ್ಯದ ಬಳಿಕವೇ ಏನಾಗಿತ್ತು ಎನ್ನುವುದು ಸ್ಪಷ್ಟವಾಗಿ ಹೊರಹೊಮ್ಮಿತ್ತು. ‘ಹಕ್ಕಿಯ ಹಿಕ್ಕಿಗಳಿಂದಾಗಿ ಆಟವನ್ನು ನಿಲ್ಲಿಸಲಾಗಿತ್ತು’ ಎಂದು ಪ್ರಣಯ್ ಹೇಳಿದರು.
ನಂತರ ಹೊರಡಿಸಿದ ಹೇಳಿಕೆಯಲ್ಲಿ ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟ (ಬಿಡಬ್ಲ್ಯುಎಫ್), ಸಕಾರಾತ್ಮಕ ಮತ್ತು ರಚನಾತ್ಮಕ ಮರುಮಾಹಿತಿಗಳು ಈ ಟೂರ್ನ್ಮೆಂಟ್ ಮತ್ತು ಭವಿಷ್ಯದ ಚಾಂಪಿಯನ್ಶಿಪ್ಗಳಿಗೆ ಉತ್ತಮ ವಾತಾವರಣವನ್ನು ರೂಪಿಸುವ ನಿಟ್ಟಿನಲ್ಲಿ ಅಮೂಲ್ಯವಾಗಿವೆ. ಆಟಗಾರರು ಹಂಚಿಕೊಂಡಿರುವ ಹೇಳಿಕೆಗಳು ಮತ್ತು ನಂತರದ ಮಾಧ್ಯಮ ವರದಿಯನ್ನೂ ನಾವು ಗಮನಿಸಿದ್ದೇವೆ. ಒಳಾಂಗಣ ವಾತಾವರಣದ ಗಾಳಿಯ ಗುಣಮಟ್ಟ ಮತ್ತು ತಾಪಮಾನದ ಮೇಲೆ ಪರಿಣಾಮ ಬೀರುವ ಮಂಜು ಮತ್ತು ಚಳಿಯಂತಹ ಋತುಮಾನದ ಸ್ಥಿತಿಗಳಿಗೆ ಸಂಬಂಧಿಸಿದ ಅಂಶಗಳನ್ನು ನಿರ್ವಹಿಸುವುದು ಈ ವಾರ ಸವಾಲೊಡ್ಡಿತ್ತು. ಸಾಮಾನ್ಯ ಸ್ವಚ್ಛತೆ,ನೈರ್ಮಲ್ಯ ಮತ್ತು ಪ್ರಾಣಿಗಳ ನಿಯಂತ್ರಣ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಹೆಚ್ಚಿನ ಗಮನ ಅಗತ್ಯವಾಗಿತ್ತಾದರೂ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಈ ಕಳವಳಗಳನ್ನು ನಿವಾರಿಸಲು ತ್ವರಿತ ಕ್ರಮ ಕೈಗೊಂಡಿದೆ ಎಂದು ತಿಳಿಸಿದೆ.
ಈ ನಡುವೆ ಯೂ ದಿಲ್ಲಿಯ ಹವಾಮಾನ,ವಾಯುಗುಣಮಟ್ಟದ ಬಗ್ಗೆ ಅಸಮಾಧಾನವನ್ನು ಹೊರಹಾಕಿದರು.







