ಮುಹ್ಸಿನ್ಖಾನ್ರಿಂದ ಏಶ್ಯ ಕಪ್ ಟ್ರೋಫಿ ಸ್ವೀಕರಿಸದಿರಲು ಮಂಡಳಿಯ ಒಮ್ಮತದ ನಿರ್ಧಾರ: BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ

ರಾಜೀವ್ ಶುಕ್ಲಾ | Photo Credit : PTI
ಹೊಸದಿಲ್ಲಿ: ಏಶ್ಯನ್ ಕ್ರಿಕೆಟ್ ಮಂಡಳಿಯ(ಎಸಿಸಿ)ಅಧ್ಯಕ್ಷ ಮುಹ್ಸಿನ್ ಖಾನ್ರಿಂದ ಏಶ್ಯ ಕಪ್ ಟ್ರೋಫಿಯನ್ನು ಸ್ವೀಕರಿಸದೇ ಇರುವ ಭಾರತೀಯ ಮಹಿಳೆಯರ ತಂಡದ ನಿರ್ಧಾರವನ್ನು ಕ್ರಿಕೆಟ್ ಮಂಡಳಿಯು ಒಮ್ಮತದಿಂದ ತೆಗೆದುಕೊಂಡಿತ್ತು. ಇದಕ್ಕೆ ನಖ್ವಿ ಅವರು ಯಾವುದೇ ರೀತಿಯ ಆಕ್ಷೇಪಣೆ ಎತ್ತಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸೋಮವಾರ ತಿಳಿಸಿದ್ದಾರೆ.
ದುಬೈನಲ್ಲಿ ರವಿವಾರ ನಡೆದಿದ್ದ ಏಶ್ಯಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 72 ರನ್ಗಳಿಂದ ಮಣಿಸಿದ್ದ ಭಾರತ ತಂಡವು ಏಶ್ಯಕಪ್ ಟ್ರೋಫಿ ಜಯಿಸಿತ್ತು. ಆದರೆ, ತಂಡವು ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಿರಲಿಲ್ಲ. ಭಾರತೀಯ ತಂಡವು ಸತತ ಎರಡನೇ ಬಾರಿ ಎಸಿಸಿ ಅಧ್ಯಕ್ಷರಿಂದ ಏಶ್ಯ ಕಪ್ ಟ್ರೋಫಿಯನ್ನು ಸ್ವೀಕರಿಸಿಲ್ಲ. ಪಹಲ್ಗಾಮ್ನಲ್ಲಿ ಉಗ್ರರ ದಾಳಿಯ ಹಿನ್ನೆಲೆಯಲ್ಲಿ 2025ರ ಏಶ್ಯಕಪ್ ವೇಳೆ ಪುರುಷರ ಕ್ರಿಕೆಟ್ ತಂಡ ಕೂಡ ನಖ್ವಿ ಅವರಿಂದ ಏಶ್ಯಕಪ್ ಅನ್ನು ಪಡೆದಿರಲಿಲ್ಲ.
‘‘ನಾವು ಈ ವಿಷಯವನ್ನು ನಮ್ಮೊಳಗೆ ಚರ್ಚಿಸಿ, ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದಿರಲು ನಿರ್ಧರಿಸಿದ್ದೆವು. ಇದು ನಮ್ಮ ಒಮ್ಮತದ ನಿರ್ಧಾರವಾಗಿತ್ತು. ಈ ಕುರಿತು ಅವರು(ನಖ್ವಿ)ಕೂಡ ಯಾವುದೇ ಆಕ್ಷೇಪ ಎತ್ತಿಲ್ಲ’’ಎಂದು ಭಾರತ ತಂಡವು ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಸುದ್ದಿಗಾರರಿಗೆ ಶುಕ್ಲಾ ತಿಳಿಸಿದರು.
ದುಬೈನಲ್ಲಿ ಏಶ್ಯಕಪ್ ಫೈನಲ್ನ ವೇಳೆ ನಖ್ವಿ ಅವರೊಂದಿಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡುತ್ತಿರುವ ಚಿತ್ರಗಳು ಎಲ್ಲೆಡೆ ವೈರಲ್ ಆಗಿವೆ. ಈ ಚಿತ್ರಗಳಿಗೆ ಟೀಕೆಗಳು ವ್ಯಕ್ತವಾಗಿರುವುದಕ್ಕೆ ಪ್ರತಿಕ್ರಿಯಿಸಿದ ಶುಕ್ಲಾ, ‘‘ಪಂದ್ಯದ ವೇಳೆ ಇದೊಂದು ವೃತ್ತಿಪರ ಸಂವಾದವಾಗಿದೆ. ಸೈಕಿಯಾ ಏನು ಹೇಳಿದ್ದಾರೋ ಅದು ಸರಿಯಿದೆ. ಅಲ್ಲಿ ಎಲ್ಲರೂ ಉಪಸ್ಥಿತರಿರುತ್ತಾರೆ. ವೃತ್ತಿಪರ ನೆಲೆಯಲ್ಲಿ ಸಂವಾದ ನಡೆಸುತ್ತಾರೆ. ಈ ಕುರಿತು ಇಷ್ಟೊಂದು ಟೀಕಿಸುವ ಅಗತ್ಯ ಕಾಣುತ್ತಿಲ್ಲ’’ ಎಂದರು.






